- ಬಿಐಇಟಿ ಕಾಲೇಜಿನಲ್ಲಿ ‘ಸಂಕಲ್ಪ-2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಯೊಬ್ಬರೊಳಗೂ ಒಂದು ದೀಪವಿದೆ. ಆ ದೀಪವೇ ನಮ್ಮ ಗುರಿ. ವಿದ್ಯಾರ್ಥಿಗಳು ಎದುರಾಗುವ ಅಡೆತಡೆ, ಒತ್ತಡ ಮತ್ತು ಆಕರ್ಷಣೆಗಳಿಂದ ಅದು ಆರದಂತೆ ಕಾಪಾಡಿಕೊಂಡು, ಶಿಸ್ತು ಹಾಗೂ ನಿರಂತರ ಪರಿಶ್ರಮದೊಂದಿಗೆ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಐಎಎಸ್ ಬಾಬಾ, ಬೆಂಗಳೂರು ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಸಂಕಲ್ಪ-2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಸ್ವಯಂ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಪ್ರತಿದಿನ ನಿಗದಿತ ವೇಳಾಪಟ್ಟಿ ರೂಪಿಸಿಕೊಂಡು ಅದರಂತೆ ಅಧ್ಯಯನ ನಡೆಸಬೇಕು. ಸೂಕ್ತ ಪುಸ್ತಕಗಳು, ದಿನಪತ್ರಿಕೆ ಹಾಗೂ ಪ್ರಚಲಿತ ವಿದ್ಯಮಾನಗಳನ್ನು ಓದಬೇಕು. ಸಂದೇಹಗಳನ್ನು ಶಿಕ್ಷಕರು ಮತ್ತು ಮಾರ್ಗದರ್ಶಕರೊಂದಿಗೆ ಚರ್ಚಿಸಬೇಕು. ಇತರರು ಎಲ್ಲಿ ಯಶಸ್ವಿಯಾದರು, ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ವಿಶ್ಲೇಷಿಸಿಕೊಂಡರೆ ನಮ್ಮನ್ನು ನಾವು ಪ್ರತಿದಿನ ಉತ್ತಮಪಡಿಸಿಕೊಳ್ಳಲು ಸಾಧ್ಯ ಎಂದರು.


ಸಂಕಲ್ಪ-1 ನಮಗೂ ಕಲಿಕೆಯ ಅನುಭವವಾಗಿತ್ತು. ಆ ಅನುಭವದ ಆಧಾರದಲ್ಲಿ ಸಂಕಲ್ಪ-2 ಅನ್ನು ಇನ್ನಷ್ಟು ವಿದ್ಯಾರ್ಥಿ ಕೇಂದ್ರಿತವಾಗಿ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ನಿಯಮಿತವಾಗಿ ಪಡೆದು ಕಾರ್ಯಕ್ರಮವನ್ನು ಮತ್ತಷ್ಟು ಉತ್ತಮಗೊಳಿಸಲಾಗುವುದು ಎಂದರು.

ತರಬೇತಿ ಕೇಂದ್ರದಲ್ಲಿ ಗ್ರಂಥಾಲಯ, ಅಗತ್ಯ ಪುಸ್ತಕಗಳು, ಬೋಧಕರು ಹಾಗೂ ಮಾರ್ಗದರ್ಶಕರ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಯಲ್ಲಿರುವ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನೂ ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿ ಮಾರ್ಗದರ್ಶನ ನೀಡುವಂತೆ ಕೋರಲಾಗಿದೆ. ಪೋಷಕರು ಕೂಡ ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಅವರು ತರಗತಿಗಳಿಗೆ ನಿಯಮಿತವಾಗಿ ಹಾಜರಾಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಸಮಸ್ಯೆ ಮತ್ತು ಸಲಹೆಗಳನ್ನು ಪಡೆದು ಪ್ರತಿ ತಿಂಗಳು ಪರಿಶೀಲಿಸಿ ಅಗತ್ಯ ಸುಧಾರಣೆಗಳನ್ನು ತರಲಾಗುವುದು ಎಂದರು.

ಸರ್ಕಾರಿ ಉದ್ಯೋಗಗಳಿಗೆ ಸಾಕಷ್ಟು ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಜಿತವಾಗಿ ಮತ್ತು ಸಮರ್ಪಕವಾಗಿ ಸಿದ್ಧತೆ ನಡೆಸಿದರೆ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬಹುದು. ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಕೌಶಲವರ್ಧನೆ ಮತ್ತು ಮರುಕೌಶಲ ತರಬೇತಿಗೂ ಆದ್ಯತೆ ನೀಡಬೇಕು. ಎಲ್ಲ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಆನ್‌ಲೈನ್‌ನಲ್ಲಿ ಲಭ್ಯವಿರುವ ಉತ್ತಮ ತರಬೇತಿ ಕಾರ್ಯಕ್ರಮಗಳನ್ನೂ ಬಳಸಿಕೊಳ್ಳಬೇಕು ಎಂದರು.

ಈ ವೇಳೆ ದಿವಂಗತ ಡಾ.ಶಾಮನೂರು ಶಿವಶಂಕರಪ್ಪಾಜಿ ಅವರ ಸೇವಾ ಸಂಕಲ್ಪವೇ ನಮಗೆ ಮಾರ್ಗದರ್ಶನ’ ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ನ ಸೇವಾ ಕಾರ್ಯಗಳು ಅವರ ಕೊಡುಗೆ ಎಂದು ನೆನಪಿಸಿಕೊಂಡರು.

ಐಟಿಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ, ದಾವಣಗೆರೆ ವಿವಿ ಕುಲಪತಿ ಡಾ. ಬಿ.ಈ. ರಂಗಸ್ವಾಮಿ, ಐಎಎಸ್ ಬಾಬಾ ಬೆಂಗಳೂರು ಸಂಸ್ಥಾಪಕ ಎಸ್.ಮೋಹನ್ ಕುಮಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಅನೇಕರು ಉಪಸ್ಥಿತರಿದ್ದರು.

- - -

(ಟಾಪ್ ಕೋಟ್‌) ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ದೊಡ್ಡ ನಗರಗಳಿಗೆ ತೆರಳಬೇಕಾಗುತ್ತದೆ. ತರಬೇತಿ ಶುಲ್ಕ, ವಸತಿ ಮತ್ತು ಊಟದ ವೆಚ್ಚ ಅವರ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿಯೇ ದಾವಣಗೆರೆಯಲ್ಲೇ ಗುಣಮಟ್ಟದ ತರಬೇತಿಯನ್ನು ಉಚಿತವಾಗಿ ಒದಗಿಸಬೇಕೆಂಬ ಉದ್ದೇಶದಿಂದ ‘ಸಂಕಲ್ಪ’ ಕಾರ್ಯಕ್ರಮ ಆರಂಭಿಸಲಾಗಿದೆ.

- ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ.

- - -

-8ಕೆಡಿವಿಜಿ38:

ದಾವಣಗೆರೆಯಲ್ಲಿ ಶನಿವಾರ ನಡೆದ ''''ಸಂಕಲ್ಪ-2'''' ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.