ಉಜ್ಜಯಿನಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿ ಸಮಾಧಿ?

| Published : Sep 10 2024, 01:40 AM IST

ಉಜ್ಜಯಿನಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿ ಸಮಾಧಿ?
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿ ಸಮಾಧಿ ಇರುವುದು ಕಂಡು ಬಂದಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಅಖಂಡ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿ ಸಮಾಧಿ ಇರುವುದು ಕಂಡು ಬಂದಿದೆ. ಈ ಬಗ್ಗೆ ಈಗಾಗಲೇ ಇತಿಹಾಸಕಾರರು ಸಂಶೋಧನೆ ನಡೆಸಿದ್ದರೂ ಇದೇ ಸ್ಥಳ ವೀರಮ್ಮಾಜಿ ಸಮಾಧಿ ಎಂದು ಇನ್ನು ನಿಖರವಾಗಿ ಗುರುತಿಸುವ ಕಾರ್ಯ ನಡೆದಿಲ್ಲ. ಈ ಬಗ್ಗೆ ಸಂಶೋಧಕರು ಸ್ಪಷ್ಠವಾದ ನಿರ್ಧಾರಕ್ಕೆ ಬರಬೇಕಿದೆ.

ಕೆಳದಿಯ ಬಸಪ್ಪನಾಯಕನ ರಾಣಿ ವೀರಮ್ಮಾಜಿ ತನ್ನ ಗಂಡನ ಸಾವಿನ ನಂತರ ತನ್ನ ಸೋದರಮಾವ ಬಂಕಾಪುರದ ಪಟ್ಟಣಶೆಟ್ಟಿ ಚನ್ನವೀರಪ್ಪನ ಮಗನನ್ನು ದತ್ತು ಪಡೆದು ಆತನಿಗೆ ಸೋಮಶೇಖರ ನಾಯಕನೆಂದು ನಾಮಕರಣ ಮಾಡಿ ರಾಜನಾಗಿ ಪಟ್ಟ ಕಟ್ಟಿದಳು. ಆ ಬಾಲಕನನ್ನು ಮುಂದಿಟ್ಟುಕೊಂಡು ತಾನೇ ಕೆಳದಿಯನ್ನು ಆಳ್ವಿಕೆ ಮಾಡುತ್ತಿದ್ದಳು. ಕ್ರಿ.ಶ.1763ರಲ್ಲಿ ಸಮಯದಲ್ಲಿ ದಂಡೆತ್ತಿ ಬಂದ ಮೈಸೂರಿನ ದೊರೆ ಹೈದರಾಲಿ ಕೆಳದಿಯ ಸಂಸ್ಥಾನ ವಶಪಡಿಸಿಕೊಂಡು ವೀರಮ್ಮಾಜಿ ಹಾಗೂ ಆಕೆಯ ದತ್ತುಪುತ್ರ 3ನೇ ಸೋಮಶೇಖರ ನಾಯಕನನ್ನು ಬಂಧಿಸಿ ಮಧುಗಿರಿಯ ಕೋಟೆಯಲ್ಲಿ ಇಟ್ಟಿದ್ದ ಎಂದು ಇತಿಹಾಸ ಹೇಳುತ್ತದೆ.

ಮರಾಠರ ದೊರೆ ಮಾಧವ ಮಧುಗಿರಿಯನ್ನು ಮುತ್ತಿಗೆ ಹಾಕಿ ವೀರಮ್ಮಾಜಿ, ಆಕೆಯ ದತ್ತುಪುತ್ರನನ್ನು ಸೆರೆಮನೆಯಿಂದ ಬಿಡಿಸಿ ಪೂನಾಕ್ಕೆ ಕರೆದೊಯ್ಯುತ್ತಿದ್ದ. ಇದೇ ಸಮಯದಲ್ಲಿ ಈಗಿನ ಅಖಂಡ ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ಸಮೀಪ ಬಂದಾಗ ತೀರಿಕೊಂಡಳು. ನಂತರ ಆಕೆಯನ್ನು ಉಜ್ಜಯಿನಿಯಲ್ಲಿಯೇ ಸಮಾಧಿ ಮಾಡಿ ದತ್ತುಪುತ್ರ 3ನೇ ಸೋಮಶೇಖರ ನಾಯಕನನ್ನು ನರಗುಂದಕ್ಕೆ ಕರೆದೊಯ್ಯಲಾಯಿತು ಎಂದು ಸಂಶೋಧಕ ಡಾ.ಚಿಟ್ನಸ್ ಹೇಳುತ್ತಾರೆ. ಇನ್ನು ಕೆಲವು ಇತಿಹಾಸಕಾರರು ವೀರಮ್ಮಾಜಿ, ದತ್ತುಪುತ್ರ ಇಬ್ಬರು ಇಲ್ಲಿಯೇ ಸಾವನ್ನಪ್ಪಿದ್ದು ಇಬ್ಬರನ್ನು ಸಹ ಉಜ್ಜಯಿನಿಯಲ್ಲಿಯೇ ಸಮಾಧಿ ಮಾಡಲಾಗಿದೆ ಎನ್ನುತ್ತಾರೆ. ಆದರೆ ಇದು ನಿಜವೇ ಎನ್ನುವುದು ಸಂಶೋಧನೆಯಿಂದ ತಿಳಿದುಬರಬೇಕಿದೆ.

ವೀರಮ್ಮಾಜಿ ಸಮಾಧಿ ತೇರು ಬಜಾರಿನ ಹತ್ತಿರ ಇದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಅಲ್ಲಿದ್ದ ಕಲ್ಲಿನಲ್ಲಿ ಮೇಲೆ ನಂದಿ ಹಾಗೂ ಅದರ ಕೆಳಗೆ ಬಲಬದಿಯಲ್ಲಿ ರಾಣಿ ಹಾಗೂ ಪಕ್ಕದಲ್ಲಿ ದತ್ತುಪುತ್ರ ಸೋಮಶೇಖರ ನಾಯಕನ ಉಬ್ಬು ಶಿಲ್ಪಗಳು ಕೆಳೆದಿಯ ರಾಜರ ಸಮಾಧಿಗಳನ್ನು ಹೋಲುತ್ತದೆ. ಈಗಾಗಿ ಇದು ವೀರಮ್ಮಾಜಿ ಸೋಮಶೇಖರನಾಯಕನ ಸಮಾಧಿಗಳು ಎನ್ನುವುದು ಇತಿಹಾಸ ಸಂಶೋಧಕ ಎಸ್.ಎಂ. ನಾಗಭೂಷಣ ಅಭಿಪ್ರಾಯ.

ತೇರುಬಯಲಿನಲ್ಲಿರುವುದು ವೀರಮ್ಮಾಜಿ ಸಮಾಧಿ ಅಲ್ಲ ಒಬ್ಬ ಪೂಜಾರಿಯ ಹೆಂಡತಿಯ ಪಾತಿವ್ರತ್ಯಕ್ಕೆ ಧಕ್ಕೆ ಬಂದಾಗ ಜೀವಂತ ಸಮಾಧಿಯಾದಳು. ಅದೇ ಇಲ್ಲಿರುವ ಕಲ್ಲು ಎಂದು ಇನ್ನು ಕೆಲವರು ಅಭಿಪ್ರಾಯಪಡುತ್ತಾರೆ.

ಇನ್ನು ಕೆಲವರು ಉಜ್ಜಯಿನಿಯ ಸದ್ಧರ್ಮ ಪೀಠದ ಆವರಣದಲ್ಲಿಯೇ ವೀರಮ್ಮಾಜಿಯ ಸಮಾಧಿ ಇದೆ ಎಂದು ನಿರ್ಧಾರಕ್ಕೆ ಬರುತ್ತಿದ್ದಾರೆ. ಹೆಚ್ಚಿನ ಸಂಶೋಧನೆ ನಡೆದರೆ ವೀರಮ್ಮಾಜಿಯ ಕೊನೆಯ ದಿನಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬಹುದು.

ಉಜ್ಜಯಿನಿಯ ಸದ್ಧರ್ಮ ಪೀಠದಲ್ಲಿರುವ ದೀಪಸ್ತಂಭವೇ ಕೆಳದಿಯ ರಾಣಿ ವೀರಮ್ಮಾಜಿಯ ಸಮಾಧಿಯಾಗಿದೆ ಎಂದು ವೀರಮ್ಮಾಜಿ ವಂಶಸ್ಥರು ಹೇಳ್ತಾರೆ.ಕೋಟ್‌:

ಉಜ್ಜಿಯಿನಿಯ ಪಂಚಪೀಠಕ್ಕೆ ವೀರಶೈವ ಧರ್ಮಕ್ಕೆ ಪರಮನಿಷ್ಠಳಾದ ವೀರಮ್ಮಾಜಿ ಇಲ್ಲಿಯೇ ಸಾವನ್ನಪ್ಪಿದ್ದಾಳೆ. ಮರುಳಸಿದ್ದೇಶ್ವರ ಸ್ವಾಮಿಯ ಎದುರಿನ ದೀಪಸ್ತಂಭವೇ ವೀರಮ್ಮಾಜಿಯ ಸಮಾಧಿ. ಜ.ಸಿದ್ದಲಿಂಗ ಶಿವಾಚಾರ್ಯರು, ಉಜ್ಜಯಿನಿಯ ಸದ್ಧರ್ಮ ಪೀಠ.