ಕೆಮ್ಮಣ್ಣುಗುಂಡಿ ಪ್ರಯಾಣ: ಪ್ರವಾಸಿಗರು ಹೈರಾಣ

| Published : Oct 25 2024, 12:53 AM IST / Updated: Oct 25 2024, 12:54 AM IST

ಸಾರಾಂಶ

ತರೀಕೆರೆ, ಬಡವರ ಊಟಿ ಎಂದೇ ಪ್ರಖ್ಯಾತಿ ಗಳಿಸಿರುವ ಶ್ರೀಸಾಮಾನ್ಯರ ನೆಚ್ಚಿನ ಪ್ರವಾಸಿ ತಾಣ ತರೀಕೆರೆ ತಾಲೂಕಿನ ಪ್ರಕೃತಿದತ್ತ ಸುಂದರ ಗಿರಿಧಾಮ ಕೆಮ್ಮಣ್ಣುಗುಂಡಿಯನ್ನು ಪ್ರಸ್ತುತ ಕಾಲಕ್ಕನುಗುಣವಾಗಿ ಸಂಪೂರ್ಣ ಅಭಿವೃದ್ಧಿ ಪಡಿಸುವ ಅಗತ್ಯವಿದೆ.

ಗಿರಿಧಾಮಕ್ಕೆ ಸರ್ವಋತು ರಸ್ತೆ ನಿರ್ಮಾಣ । ಪ್ರವಾಸಿಗರಿಗೆ ನಿತ್ಯ ವಾಹನ ಸಂಚಾರ ಇತ್ಯಾದಿ ಮೂಲ ಸೌಲಭ್ಯಗಳು ಅಗತ್ಯ

ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ

ಬಡವರ ಊಟಿ ಎಂದೇ ಪ್ರಖ್ಯಾತಿ ಗಳಿಸಿರುವ ಶ್ರೀಸಾಮಾನ್ಯರ ನೆಚ್ಚಿನ ಪ್ರವಾಸಿ ತಾಣ ತರೀಕೆರೆ ತಾಲೂಕಿನ ಪ್ರಕೃತಿದತ್ತ ಸುಂದರ ಗಿರಿಧಾಮ ಕೆಮ್ಮಣ್ಣುಗುಂಡಿಯನ್ನು ಪ್ರಸ್ತುತ ಕಾಲಕ್ಕನುಗುಣವಾಗಿ ಸಂಪೂರ್ಣ ಅಭಿವೃದ್ಧಿ ಪಡಿಸುವ ಅಗತ್ಯವಿದೆ.

ಕೆಮ್ಮಣ್ಣುಗುಂಡಿ ನೈಸರ್ಗಿಕ ಸೌಂದರ್ಯದ ಕಣಜ ಈ ಪ್ರದೇಶದಲ್ಲಿ ಪ್ರಕೃತಿದತ್ತ ಗುಡ್ಡ ಬೆಟ್ಟಗಳು-ಗಿರಿಶ್ರೇಣಿಗಳು, ಅಮೂಲ್ಯವಾದ ಔಷಧ ಸಸ್ಯ ಸಂಪತ್ತು, ವರ್ಷಪೂರ್ತಿ ಆಯಾ ಕಾಲಕ್ಕೆ ಹೊಂದಿಕೊಂಡಂತೆ ಇರುವ ವಾತಾವರಣ, ಅಪರೂಪವೆನಿಸುವ ಮತ್ತು ವೈವಿದ್ಯಮಯವಾದ ತರಹೆ ವಾರಿನ ಹೂದೋಟಗಳು, ಕೆಮ್ಮಣಗುಂಡಿ ಸುತ್ತಮುತ್ತ ಇರುವ ಕಣ್ಮನ ತಣಿಸುವ ಜಲಧಾರೆಗಳು, ಜಲಪಾತಗಳು, ಸಣ್ಣಪುಟ್ಟ ತೊರೆಗಳು, ಆಕಾಶ ದೆತ್ತರಕ್ಕೆ ಬೆಳೆದು ನಿಂತ ವೃಕ್ಷರಾಶಿ ಇವುಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ.

ಸೂರ್ಯಾಸ್ಥಮಾನಃ

ಕೆಮ್ಮಣ್ಣುಗುಂಡಿ ಗಿರಿಧಾಮದ ಅತ್ಯಂತ ಪ್ರಮುಖ ವೀಕ್ಷಣೆ ಕೇಂಧ್ರಬಿಂದು ವೆಂದರೆ ಅದು ಸೂರ್ಯಾಸ್ತಮಾನ. ಅತ್ಯಂತ ಎತ್ತರದ ಸ್ಥಳದಲ್ಲಿ ಸಾಯಂಕಾಲ ಇಳಿಹೊತ್ತಿನಲ್ಲಿ ಸೂರ್ಯಾಸ್ತ ಸುಂದರ ಕ್ಷಣಗಳನ್ನು ನೋಡುತ್ತ ನಿಂತರೆ ಸಮಯ ಕಳೆದದ್ದೆ ಗೊತ್ತಾಗುವುದಿಲ್ಲ. ಅಂತಹ ಅಪರೂಪದಲ್ಲಿ ಅಪರೂಪವೆನಿಸುವ ಸೂರ್ಯಾಸ್ತಮಾನ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತದೆ. ಕೆಮ್ಮಣಗುಂಡಿಯ ಮತ್ತೊಂದು ಪ್ರಮುಖ ಸ್ಥಳವೆಂದರೆ ಅಲ್ಲಿಯ ಜೆಡ್ ಪಾಯಿಂಟ್ ಈ ಸ್ಥಳ ಪ್ರವಾಸಿಗರನ್ನು ಮೂಕ ವಿಸ್ಮಿತಗೊಳಿಸುತ್ತದೆ.

ಕೆಮ್ಮಣ್ಣುಗುಂಡಿಯಲ್ಲಿ ಮೋಡಗಳಂತೆ ಭಾಸವಾಗುವ ಪ್ರಕೃತಿದತ್ತ ಗಿರಿಶ್ರೇಣಿಗಳನ್ನು ಅವರಿಸಿದ ನೀಲಿ ಆಕಾಶದ ಸುಂದರ ಛಾವಣಿ ಕ್ಷಣಕಾಲ ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಪ್ರಕೃತಿಯ ಸೊಬಗನ್ನೆಲ್ಲ ಹೊತ್ತು ನೀಂತ ಈ ಬಹು ಆಕರ್ಷಿತ ಪ್ರವಾಸಿ ತಾಣಕ್ಕೆ ಈ ಹಿಂದೆ ವರ್ಷಪೂರ್ತಿ ನಿತ್ಯ ಪ್ರವಾಸಿಗರು ಬಂದು ಹೋಗುವ ಪರಿಪಾಠ ಇತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶ್ರೀಸಾಮಾನ್ಯರು, ನಾಡಿನ ಗಣ್ಯಾತಿ ಗಣ್ಯರು, ಚಲನಚಿತ್ರ ನಟರು, ಚಾರಣಪ್ರಿಯರು, ಪರಿಸರ ಪ್ರೇಮಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಭೇಟಿ ನೀಡಿ ಪ್ರವಾಸಿ ಧಾಮದಲ್ಲಿ ತಂಗಿ ಗಿರಿಧಾಮದ ಪ್ರಕೃತಿದತ್ತ ದೃಶ್ಯಗಳನ್ನು ಮನಸಾರೆ ಸಂತೋಷ ಪಟ್ಟು ಸವಿಯುತ್ತಿದ್ದರು.

ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಪ್ರವಾಸ ಹೋಗುವುದೆಂದರೆ ಪ್ರವಾಸಿಗರಿಗೆ ಅದೊಂದು ರೀತಿಯ ಬಹು ದೊಡ್ಡ ಹಬ್ಬವೆನಿಸುತ್ತಿತ್ತು, ಕೆಮ್ಮಣ್ಣುಗುಂಡಿ ಗಿರಿದಾಮದ ಪ್ರವಾಸಕ್ಕೆ ಎಷ್ಟೋ ದಿನಗಳ ಮುಂಚಿನಿಂದಲೇ ಸಿದ್ದಪಡಿಸಿಕೊಳ್ಳುತ್ತಿದ್ದರು. ಆದರೆ ಇಂದು ಕೆಮ್ಮಣ್ಣುಗುಂಡಿ ಗಿರಿಧಾಮದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಇಲ್ಲಿ ಮೂಲಸೌಲಭ್ಯಗಳ ಕೊರತೆಯ ದೊಡ್ಡ ಪಟ್ಟಿಯೇ ಇದೆ. ಕೆಮ್ಮಣ್ಣುಗುಂಡಿಗೆ ನಿಶ್ಚಿಂತೆ ಯಿಂದ ಬಂದು ಹೋಗೋಣವೆಂದರೆ ಮೊದಲಾಗಿ ಗಿರಿಧಾಮಕ್ಕೆ ಬಂದು ಹೋಗಲು ಸರ್ಕಾರಿ ವಾಹನ ಸೌಕರ್ಯವಿಲ್ಲ. ಗಿರಿಧಾಮಕ್ಕೆ ಹೋಗ ಬೇಕೆಂದರೆ ಪ್ರವಾಸಿಗರು ಅವರದ್ದೇ ಆದ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಿ ಬರಬೇಕು. ಸರ್ಕಾರ ಶಕ್ತಿ ಯೋಜನೆ ಮೂಲಕ ನಾಡಿನ ಯಾತ್ರಾಸ್ಥಳಗಳಿಗೆ, ಅನೇಕ ಪ್ರವಾಸಿ ಸ್ಥಳಗಳಿಗೆ ಮಹಿಳೆಯರಿಗೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ, ಕೆಮ್ಮಣಗುಂಡಿ ಗಿರಿಧಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಇಲ್ಲ.

ಈ ಗಿರಿಧಾಮಕ್ಕೆ ಪ್ರವಾಸಿಗರು ಬಂದು ಹೋಗಲು ಚಿಕ್ಕಮಗಳೂರು, ತರೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಇತ್ಯಾದಿ ಕಡೆಗಳಿಂದ ಸರ್ಕಾರಿ ವಾಹನಗಳ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡಬೇಕಿದೆ.ಜತೆಗೆ ಕೆಮ್ಮಣಗುಂಡಿ ಗಿರಿಧಾಮಕ್ಕೆ ನಾಮಫಲಕಗಳ ದಿಕ್ಸೂಚಿ, ಕೆಮ್ಮಣಗುಂಡಿ ಗಿರಿಧಾಮದ ಅನೇಕ ಆಕರ್ಷಣೀಯ ಸ್ಥಳಗಳ ಚಿತ್ರಣ ಹೊಂದಿರುವ ಫಲಕಗಳನ್ನು ಮುಖ್ಯವಾದ ಆಯಕಟ್ಟಿನ ಸ್ಥಳಗಳಲ್ಲಿ ಇಲಾಖೆ ಪ್ರದರ್ಶಿಸಬೇಕು.

ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಸಂಬಂದಿಸಿದ ಇಲಾಖೆ ಪ್ರವಾಸಿಗರಿಗೆ ಅಗತ್ಯ ವಾದ ಬಸ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿದರೆ ಮತ್ತೆ ಕೆಮ್ಮಣ್ಣುಗುಂಡಿ ತನ್ನ ಹಿಂದಿನ ವೈಭವವನ್ನು ಪಡೆಯಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕೆಮ್ಮಣ್ಣುಗುಂಡಿ ಗಿರಿಧಾಮ 1473 ಮೀ. ಸಮುದ್ರ ಮಟ್ಟದಿಂದ ಎತ್ತರದಲ್ಲಿದ್ದು ಹವಾಗುಣದಲ್ಲಿ ಮಳೆ ವಾರ್ಷಿಕವಾಗಿ 100 ಅಂಗುಲ ಕ್ಕಿಂತ ಹೆಚ್ಚಾಗಿ ಸುರಿಯುವುದರ ಜೊತೆಗೆ ಚಳಿಗಾಲದಲ್ಲಿ ಉಷ್ಣಾಂಶ 08 ಸೆಲ್ಸಿಯಸ್‌ ನಿಂದ ಬೇಸಿಗೆ ಕಾಲದಲ್ಲಿ 28 ಸೆಲ್ಸಿಯಸ್‌ ಮೀರದಂತೆ ತಂಪಾದ ಸಹನೀಯ ವಾತಾವರಣ ಹೊಂದಿರುತ್ತದೆ. ದಕ್ಷಿಣ ಭಾರತದಲ್ಲಿಯೇ ರಮಣೀಯ ಕ್ಷೇತ್ರವಾದ ಕೆಮ್ಮಣ್ಣುಗುಂಡಿ ಕರ್ನಾಟಕದ ಹೆಮ್ಮೆ.24ಕೆಟಿಆರ್.ಕೆ.10ಃ

ಕೆಮ್ಮಣಗುಂಡಿ ಪ್ರವಾಸಿ ಗಿರಿಧಾಮದಲ್ಲಿರುವ ಸುಂದರ ರಮಣೀಯ ದೃಶ್ಯಗಳು