ಕೆಂಪೇಗೌಡ ಲೇಔಟ್‌ ಮುಖ್ಯರಸ್ತೆ ನಿರ್ಮಾಣಕ್ಕೆ ಇದ್ದ ತಡೆ ನಿವಾರಣೆ

| Published : Jun 25 2024, 01:45 AM IST / Updated: Jun 25 2024, 05:34 AM IST

ಕೆಂಪೇಗೌಡ ಲೇಔಟ್‌ ಮುಖ್ಯರಸ್ತೆ ನಿರ್ಮಾಣಕ್ಕೆ ಇದ್ದ ತಡೆ ನಿವಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಲ್ಲಘಟ್ಟದ ಸಮೀಪ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸಮ್ಮತಿ ನೀಡಿದೆ.

 ಬೆಂಗಳೂರು : ಚಲ್ಲಘಟ್ಟದ ಸಮೀಪ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸಮ್ಮತಿ ನೀಡಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಾದು ಹೋಗಿರುವ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಮೇಜರ್ ಆರ್ಟಿರಿಯಲ್‌ ರಸ್ತೆ(ಎಂಎಆರ್‌) ನಿರ್ಮಾಣಕ್ಕೆ ಇದ್ದ ತಡೆ ನಿವಾರಣೆಯಾಗಿದೆ.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಚಲ್ಲಘಟ್ಟ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಅನಿವಾರ್ಯವಾಗಿತ್ತು. 2019ರಲ್ಲಿಯೇ ಅನುಮತಿ ಕೋರಿ ರೈಲ್ವೆ ಇಲಾಖೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿತ್ತು. ಆದರೆ, ಆ ನಂತರ ಕೋವಿಡ್‌, ಎಂಎಆರ್‌ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಭೂಸ್ವಾಧೀನ ಮತ್ತು ಇತರೆ ಕಾರಣಗಳಿಂದ ರೈಲ್ವೆ ಇಲಾಖೆ ಅನುಮತಿ ಪಡೆಯಲು ವಿಳಂಬವಾಗಿತ್ತು. ಇದೀಗ ಕೆಳಸೇತುವೆ ನಿರ್ಮಾಣಕ್ಕೆ ಮೇ 30ರಂದು ರೈಲ್ವೆ ಇಲಾಖೆ ಸಮ್ಮತಿ ಸೂಚಿಸಿದ್ದು, ಆರ್‌ಯುಬಿ (ರೈಲ್ವೆ ಅಂಡರ್‌ ಬ್ರಿಡ್ಜ್‌) ಕಾಮಗಾರಿ ಆರಂಭಿಸಲು ಬಿಡಿಎ ಸಿದ್ಧತೆ ನಡೆಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು ₹39 ಕೋಟಿ ವೆಚ್ಚದಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣವಾಗಲಿದ್ದು, ಮೇಜರ್‌ ಆರ್ಟೀರಿಯಲ್‌ ರಸ್ತೆ ನಿರ್ಮಾಣ ಮಾಡುತ್ತಿರುವ ಸ್ಟಾರ್‌ ಇನ್‌ಫೋಟೆಕ್‌ ಕಂಪನಿಯೇ ಈ ಕೆಳಸೇತುವೆ ನಿರ್ಮಾಣದ ಟೆಂಡರ್‌ ಪಡೆದುಕೊಂಡಿದೆ. ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಬರುವ ಚಲ್ಲಘಟ್ಟದಲ್ಲಿ ಈ ಕೆಳ ಸೇತುವೆಯು ಮೆಟ್ರೋ ನಿರ್ಮಿಸುತ್ತಿರುವ ಸುರಂಗ ಮಾರ್ಗವನ್ನು ಸಂಪರ್ಕಿಸಲಿದ್ದು, ಇದು ನಾಲ್ಕುಪಥದ ರಸ್ತೆಯಾಗಿರಲಿದೆ.

ಮೇಜರ್‌ ಆರ್ಟೀರಿಯಲ್‌ ರಸ್ತೆಯ ಸುಮಾರು 1.1 ಕಿ.ಮೀ. ಕಾಮಗಾರಿ ಬಾಕಿಯಿದೆ. ಸೂಳಿಕೆರೆ, ಮಾಚೋಹಳ್ಳಿ ಕೈಗಾರಿಕಾ ಜಮೀನು ಸೇರಿದಂತೆ ವಿವಿಧೆಡೆ ಜಮೀನಿಗೆ ಸಂಬಂಧಿಸಿದ ದಾವೆಗಳು ನ್ಯಾಯಾಲಯದಲ್ಲಿದೆ. ವಿಚಾರಣೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದೆ. ಆ ನಂತರ ಉಳಿದಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

₹450 ಕೋಟಿ ವೆಚ್ಚ

ಎಂಎಆರ್‌ ಸುಮಾರು 10.75 ಕಿ.ಮೀ. ಉದ್ದ ಇರಲಿದ್ದು, ಅಂದಾಜು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. 100 ಮೀಟರ್‌ ಅಗಲ ಇರಲಿದ್ದು, 8 ಪಥದ ರಸ್ತೆಯಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್‌ಗಳನ್ನು ಪ್ರವೇಶಿಸಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಎಂಎಆರ್‌ನಲ್ಲಿ 2.90 ಕಿ.ಮೀ, 5.10 ಕಿ.ಮೀ ಹಾಗೂ 9.70 ಕಿ.ಮೀ ಅಂತದಲ್ಲಿ ಮೂರು ಅಂಡರ್‌ಪಾಸ್‌ ನಿರ್ಮಾಣವಾಗುತ್ತಿವೆ. ಜೊತೆಗೆ 35 ಸಣ್ಣ ಸೇತುವೆಗಳು, 1 ರೈಲ್ವೆ ಕೆಳಸೇತುವೆ ಈ ಯೋಜನೆಯಲ್ಲಿರಲಿವೆ.