ಕೆಂಪೇಗೌಡ ಲೇಔಟ್‌ ನಿಧಾನಗತಿಕಾಮಗಾರಿ: ಬಿಡಿಎ ವಿರುದ್ಧ ಗರಂ

| Published : Jun 29 2024, 01:18 AM IST / Updated: Jun 29 2024, 07:11 AM IST

ಕೆಂಪೇಗೌಡ ಲೇಔಟ್‌ ನಿಧಾನಗತಿಕಾಮಗಾರಿ: ಬಿಡಿಎ ವಿರುದ್ಧ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿಧಾನಗತಿ ಮತ್ತು ಮೂಲಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
  •  ಬೆಂಗಳೂರು :    ಕೆಂಪೇಗೌಡ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿಧಾನಗತಿ ಮತ್ತು ಮೂಲಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬಡಾವಣೆಯಲ್ಲಿ ಹಂಚಿಕೆಯಾಗಿರುವ 26 ಸಾವಿರ ನಿವೇಶನಗಳಲ್ಲಿ ಕೇವಲ 26 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಕಡಿಮೆ ಮನೆಗಳ ನಿರ್ಮಾಣವಾಗಿರುವುದಕ್ಕೆ ಬಿಡಿಎ ಮೂಲಸೌಕರ್ಯಗಳ ಕೊರತೆ ಕಾರಣ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆಯಲ್ಲಿ ಬಿಡಿಎ ಆಯುಕ್ತರು ಖುದ್ದು ಹಾಜರಾಗಿ ಸಮಜಾಯಿಷಿ ನೀಡಬೇಕೆಂದು ಸೂಚನೆ ನೀಡಿದೆ.

ಸೆಪ್ಟೆಂಬರ್ 2023ನಲ್ಲಿ ಸಮಿತಿ ಮುಂದೆ ಪ್ರಾಧಿಕಾರ ಒಪ್ಪಿಕೊಂಡಂತೆ ಹಂತ ಹಂತವಾಗಿ ಈಗಾಗಲೇ ಬಡಾವಣೆಯ 9 ಬ್ಲಾಕ್ ಗಳಲ್ಲೂ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರಬೇಕಾಗಿತ್ತು ಅಥವಾ ಪೂರ್ಣಗೊಳ್ಳುವ ಹಂತದಲ್ಲಿ ಇರಬೇಕಾಗಿತ್ತು, ಬಡಾವಣೆಯ ಕೇವಲ ಮೂರು ಬ್ಲಾಕ್ ಗಳು ಭಾಗಶಃ ಪೂರ್ಣಗೊಳ್ಳುವ ಸ್ಥಿತಿಯಲ್ಲಿದೆ ಎಂಬುದಕ್ಕೆ ತಮ್ಮದೇ ಸಮರ್ಥನೆಯನ್ನು ನೀಡಲು ಅಧಿಕಾರಿಗಳು ಮುಂದಾದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹೀಗಿದ್ದರೆ ಯಾವಾಗ ಕಾಮಗಾರಿಗಳನ್ನು ಮುಗಿಸುವುದು ಎಂಬ ಸಮಿತಿಯ ಪ್ರಶ್ನೆಗೆ ಬಿಡಿಎ ಅಧಿಕಾರಿಗಳು ನಿರುತ್ತರರಾದರು.

ಆಯುಕ್ತರ ಅನುಪಸ್ಥಿತಿಯಿಂದಾಗಿ ಸರಿಯಾದ ಉತ್ತರವು ಸಿಗದೇ ಇದ್ದದರಿಂದ ಅಸಮಾಧಾನಗೊಂಡ ಸಮಿತಿಯ ಪದಾಧಿಕಾರಿಗಳು, ಅರ್ಜಿಯ ವಿಚಾರಣೆಯನ್ನು ಕಲಾಪದ ನಂತರ ತೆಗೆದುಕೊಳ್ಳಲು ತೀರ್ಮಾನಿಸಿದೆ. ಜೊತೆಗೆ ವಿಚಾರಣೆ ಸಂದರ್ಭದಲ್ಲಿ ಬಿಡಿಎ ಆಯುಕ್ತರು ಉಪಸ್ಥಿತರಿರಬೇಕೆಂದು ಸೂಚಿಸಿದೆ ಎಂದು ಎನ್‌ಪಿಕೆಎಲ್‌ ಮುಕ್ತ ವೇದಿಕೆಯ ಸೂರ್ಯಕಿರಣ್‌ ಮಾಹಿತಿ ನೀಡಿದ್ದಾರೆ.