ಬೆಂಗಳೂರು ನಗರ ಕಟ್ಟುವಲ್ಲಿ ಕೆಂಪೇಗೌಡರ ಶ್ರಮ ಅವಿಸ್ಮರಣೀಯ

| Published : Jun 28 2024, 12:55 AM IST

ಸಾರಾಂಶ

ಮೊಳಕಾಲ್ಮುರು ಪಟ್ಟಣದ ಆಡಳಿತ ಸೌಧದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ತಹಸೀಲ್ದಾರ್‌ ಅಭಿಮತ । ತಾಲೂಕು ಆಡಳಿತದಿಂದ ಕೆಂಪೇಗೌಡ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ನಗರ ಕಟ್ಟುವಲ್ಲಿ ನಾಡ ದೊರೆ ಕೆಂಪೇಗೌಡರ ಶ್ರಮ ಅವಿಸ್ಮರಣೀಯ ಎಂದು ತಹಸೀಲ್ದಾರ್ ಟಿ.ಜಗದೀಶ ಹೇಳಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯ ನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿದ್ದ ಕೆಂಪೇಗೌಡರು ಕೇವಲ ಒಂದು ವರ್ಗಕ್ಕೆ ಸೀಮಿತರಾಗದೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿ ಜನತೆಗೆ ಉತ್ತಮ ಆಡಳಿತ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಕೆರೆ ಕಟ್ಟೆಗಳ ನಿರ್ಮಾಣ, ಅಚ್ಚುಕಟ್ಟಾದ ನಗರ ನಿರ್ಮಿಸಿರುವುದು ಸೇರಿದಂತೆ ಅವರ ಚಿಂತನೆಗಳ ತಳ ಹದಿಯ ಮೇಲೆ ಬೆಂಗಳೂರು ವಿಶಾಲವಾಗಿ ಬೆಳೆಯುತ್ತಿದೆ ಎಂದರು.

ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣವಾಗಿದೆ. ಅವರ ಚಿಂತನೆ ಮತ್ತು ಆಡಳಿತ ವ್ಯವಸ್ಥೆಯಿಂದ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬಹುವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಜಾತಿ, ಧರ್ಮ, ಪಂಥ ಎನ್ನದೆ ಸರ್ವರಿಗೂ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದರು.

ಈ ವೇಳೆ ಬಿಇಒ ನಿರ್ಮಲಾದೇವಿ, ಪಶು ಇಲಾಖೆಯ ಎಡಿ ಡಾ.ರಂಗಪ್ಪ, ಶಿರೆಸ್ತೇದಾರ್ ಏಳುಕೋಟಿ, ಸಿದ್ದಯ್ಯನ ಕೋಟೆ ಶ್ರೀಮಠದ ಕಾರ್ಯದರ್ಶಿ ಕಾಂತರಾಜ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್ ಇದ್ದರು.