ಪ್ರಜಾ ಕಾಳಜಿ ತೋರಿಸಿ ಕೊಟ್ಟ ಕೆಂಪೇಗೌಡ: ಹರೀಶ್‌ ಪೂಂಜ

| Published : Jul 02 2025, 12:20 AM IST

ಪ್ರಜಾ ಕಾಳಜಿ ತೋರಿಸಿ ಕೊಟ್ಟ ಕೆಂಪೇಗೌಡ: ಹರೀಶ್‌ ಪೂಂಜ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ 516 ನೇ ಕೆಂಪೇಗೌಡ ಜಯಂತಿ ನೆರವೇರಿತು. ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಾಯಕತ್ವ ಎಂಬುದು ಸಮಾಜದ ಶಕ್ತಿ, ಪ್ರಜೆಗಳ ಬಗೆಗಿನ ಕಾಳಜಿ ಇರಬೇಕೆಂಬುದನ್ನು ತೋರಿಸಿಕೊಟ್ಟವರು ನಾಡಪ್ರಭು ಕೆಂಪೇಗೌಡರು. ಇವರ ಕಾರ್ಯವೈಖರಿಯನ್ನು ಜಗತ್ತು ಗುರುತಿಸಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ ವತಿಯಿಂದ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡರ ಸಂಘ, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡರ ಸೇವಾ ಟ್ರಸ್ಟ್, ತಾಲೂಕು ಒಕ್ಕಲಿಗ ಗೌಡರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ಶುಕ್ರವಾರ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ 516 ನೇ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಒಂದು ಪಟ್ಟಣ ನೂರಾರು ವರ್ಷಗಳ ಕಾಲ‌ ಚಿಂತಿಸಿ, ಸಾವಿರಾರು ವರ್ಷಗಳ ಪೀಳಿಗೆಗೆ ಕೊಡುಗೆಯಾಗಿ ನೀಡಿದವರು. 60 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗಳೂರು ಬೆಳೆಯಬೇಕೆಂಬ ಉದಾತ್ತ ಚಿಂತನೆ ಮಾಡಿದವರು ಕೆಂಪೇಗೌಡರು ಎಂದು ಅವರು ಸ್ಮರಿಸಿದರು.ಪ್ರಧಾನ ಭಾಷಣಕಾರ ಧ.ಮಂ.ಪ.ಪೂರ್ವ ಕಾಲೇಜಿನ ಉಪನ್ಯಾಸಕ‌ ಡಾ.ಮಹಾವೀರ ಜೈನ್ ಇಚ್ಲಂಪಾಡಿ ಮಾತನಾಡಿ, ಓರ್ವ ಆದರ್ಶ ವ್ಯಕ್ತಿ ಸ್ವಂತಕ್ಕಾಗಿ ದುಡಿಯದೆ ಸಮಾಜಕ್ಕಾಗಿ ಸರ್ವಸ್ವ ಮುಡಿಪಾಗಿಸಿದರೆ ಅವರ ಹೆಸರು ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಐದು ಶತಮಾನಗಳ ಬಳಿಕವೂ ಕೆಂಪೇಗೌಡರ ಜಯಂತಿ ಇಂದಿಗೂ ಆಚರಿಸಲ್ಪಡುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಪಿ.ಶ್ರೀನಾಥ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮತ್ತಿತರರಿದ್ದರು.

ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ:ಕೆಂಪೇಗೌಡ ಜಯಂತಿ ಪ್ರಯುಕ್ತ ತಾಲೂಕು ಮಟ್ಟದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವೇಣೂರು ಸ.ಪ್ರೌ.ಶಾಲೆಯ ಶರತ್, ಪುಂಜಾಲಕಟ್ಟೆ ಪಬ್ಲಿಕ್ ಶಾಲೆಯ ಭೂಷಣ್ ದ್ವಿತೀಯ ಸ್ಥಾನ ಪಡೆದರು. ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿ.ತನೂಶ್ ರೈ, ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ರಿಧೂ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಶೇಕ್ ಮಹಮದ್ ಶಿಯಾನ್ ತೃತೀಯ ಸ್ಥಾನ ಪಡೆದಿದ್ದು, ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜೋಸೆಫ್ ಎನ್.ಎಂ. ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು.