ಸಾರಾಂಶ
ಮಾಗಡಿ: ಯಾವುದೇ ಕಾರಣಕ್ಕೂ ಎಚ್.ಎಂ.ಕೃಷ್ಣಮೂರ್ತಿ ನಿರ್ಮಿಸಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರಿಸದಂತೆ ಸ್ಪಟಿಕಪುರಿ ಮಠಾಧ್ಯಕ್ಷರಾದ ಡಾ.ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ಕೆಂಪೇಗೌಡರ 516ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಕೆಂಪೇಗೌಡ ಪ್ರತಿಮೆ ಸ್ಥಳಾಂತರಕ್ಕೆ ಶಾಸಕ ಎಚ್.ಸಿ. ಬಾಲಕೃಷ್ಣ ಮುಂದಾಗಿದ್ದು, ಈಗ ಇರುವ ಪ್ರತಿಮೆಯ ನಾಲ್ಕು ಪಟ್ಟು ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಮಾಗಡಿಯಲ್ಲಿ ಸ್ಥಾಪಿಸಿ ನಂತರ ಸ್ಥಳಾಂತರಕ್ಕೆ ಕೈ ಹಾಕಬೇಕು. ಇಲ್ಲವಾದರೆ ಸ್ಥಳಾಂತರಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಶ್ರೀಗಳು ಎಚ್ಚರಿಕೆಯ ಸಂದೇಶ ನೀಡಿದರು.ಕೆಂಪೇಗೌಡರ ಕೋಟೆ ಮೂಲ ಸ್ವರೂಪ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕು. ಮೂಲ ಸ್ವರೂಪಕ್ಕೆ ಧಕ್ಕೆಬರಬಾರದು. ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿ ಮಾಡಬೇಕು. ಎಕೋ ಟೂರಿಸಂ ಮೂಲಕ ಮಾಗಡಿಯಲ್ಲಿ ಒಂದು ದಿನದ ಪ್ರವಾಸಕ್ಕೆ ಪ್ರಸಿದ್ಧ ಸ್ಥಳಗಳ ಅಭಿವೃದ್ಧಿ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಕೆಂಪೇಗೌಡರು ದೂರದೃಷ್ಟಿ ನಾಯಕರು. ಅವರ ಚರಿತ್ರೆ ಕುರಿತು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಆಗ ಇಂದಿನ ಮಕ್ಕಳು ಅವರ ಆದರ್ಶಗಳನ್ನು ಪಾಲಿಸಲು ಅನುಕೂಲವಾಗಲಿದೆ. ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮವೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದರ ಜತೆಗೆ 121 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಯಿತು ಎಂದು ನಂಜಾವಧೂತ ಶ್ರೀ ಹೇಳಿದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಲು ಸಾಕಷ್ಟು ಶ್ರಮ ಹಾಕಿದ್ದು ಅವರ ಜಯಂತ್ಯುತ್ಸವವನ್ನು ಪ್ರತಿ ವರ್ಷವೂ ಮಾಗಡಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ. ಕೆಂಪೇಗೌಡರ ಆದರ್ಶಗಳನ್ನು ಇಂದಿನ ಯುವಜನತೆ ಪಾಲಿಸಬೇಕು ಎಂದು ತಿಳಿಸಿದರು.
ಕೆಂಪೇಗೌಡ ಅಭಿವೃದ್ಧಿ ಸಮತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ಸತತ 22 ವರ್ಷಗಳಿಂದಲೂ ಕೆಂಪೇಗೌಡ ಅಭಿವೃದ್ಧಿ ಸಮಿತಿಯಿಂದ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು ಕೆಂಪೇಗೌಡರ ಆದರ್ಶದಂತೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಪುಸ್ತಕ, ಆರೋಗ್ಯ ಶಿಬಿರ, ಉಚಿತ ಸಾಮೂಹಿಕ ವಿವಾಹ ಇತ್ಯಾದಿ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ನೊಣವಿನಕೆರೆ ಕಾಡುಸಿದ್ದೇಶ್ವರ ಮಠ ಅಧ್ಯಕ್ಷರಾದ ಶಿವ ಯೋಗೇಶ್ವರ ಸ್ವಾಮೀಜಿ, ಮಾದಿಗೊಂಡನಹಳ್ಳಿ ರಂಗನಾಥ್ ಸ್ವಾಮಿ, ಚಕ್ರಬಾವಿ ಮರುಳು ಸಿದ್ದೇಶ್ವರ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ಬೆಟ್ಟಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ
ಕೆಂಪೇಗೌಡರ ಪ್ರತಿಮೆ ಹಾಗೂ ರಾಸುಗಳಿಗೆ ಪೂಜೆ ಸಲ್ಲಿಸಿ ಪುರಸಭೆಯಿಂದ ಕೋಟೆ ಮೈದಾನದವರೆಗೂ ಕೆಂಪೇಗೌಡರ ಕಂಚಿನ ಪುತ್ಥಳಿ ಮೆರವಣಿಗೆ ಮಾಡಲಾಯಿತು. ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ಕೋರಲಾಯಿತು.ಕಾರ್ಯಕ್ರಮದಲ್ಲಿ ಗುಂಸಂದ್ರ ಮಠದ ಚಂದ್ರಶೇಖರ ಸ್ವಾಮೀಜಿ, ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಚಲನಚಿತ್ರ ನಟ ಶ್ರೀನಗರ ಕಿಟ್ಟಿ, ವಶಿಷ್ಟ ಸಿಂಹ, ಶರತ್, ಧರ್ಮ, ನಿರ್ಮಾಪಕ ಎಲೆ ರಮೇಶ್, ಗೀತಾ ರಚನೆಕಾರ ವಿ.ನಾಗೇಂದ್ರ ಪ್ರಸಾದ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ರೈತ ಸಂಘದ ಅಧ್ಯಕ್ಷ ಲೋಕೇಶ್, ಪುರಸಭೆ ಸದಸ್ಯರಾದ ಪುರುಷೋತ್ತಮ್ ಕೆ ವಿ ಬಾಲು, ಎಂ.ಎನ್. ಮಂಜು, ಮುಖಂಡರಾದ ಮಾಡಬಾಳ್ ಜಯರಾಂ, ಬೆಳಗುಂಬ ವಿಜಯಕುಮಾರ್, ಶಿವಕುಮಾರ್, ಕೋಳಿ ಅಂಗಡಿ ಪುಟ್ಟಸ್ವಾಮಿ, ಗಂಗಾಧರ್, ದೊಡ್ಡಿ ಗೋಪಿ, ಆನಂದ್, ಮೋಹನ್, ನಾಗರಾಜು ಇತರರು ಭಾಗವಹಿಸಿದ್ದರು.