ಎಲ್ಲ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದ ಕೆಂಪೇಗೌಡರು: ಡಾ.ಅಣ್ಣಯ್ಯ ತೈಲೂರು

| Published : Jun 28 2024, 12:57 AM IST

ಸಾರಾಂಶ

ಒಂದು ದಿನ ಬೆಂಗಳೂರು ಬೃಹದಾಕಾರವಾಗಿ ಬೆಳೆಯಬಹುದು ಎಂಬ ಆಶಯದಿಂದ ಬೆಂಗಳೂರಿನ ನಾಲ್ಕು ಕಡೆ ನಾಲ್ಕು ದ್ವಾರಗಳ ನಿರ್ಮಿಸಿದ್ದರು. ಇಂದು ಬೆಂಗಳೂರು ಎಲ್ಲ ಜನಾಂಗಗಳ ಹೆಚ್ಚಿನ ವಾಸಸ್ಥಾನವಾಗಿದೆ. ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.

ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ವಿಜಯನಗರ ಅರಸರ ರಾಜ್ಯಪಾಲರಾಗಿ ನಂತರ ಬೆಂಗಳೂರನ್ನೇ ಆಳಿದ ಕೆಂಪೇಗೌಡರು ಒಕ್ಕಲಿಗ ಸಮುದಾಯದವರಾದರೂ ಕೂಡ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಬಣ್ಣಿಸಿದರು.

ಒಂದು ದಿನ ಬೆಂಗಳೂರು ಬೃಹದಾಕಾರವಾಗಿ ಬೆಳೆಯಬಹುದು ಎಂಬ ಆಶಯದಿಂದ ಬೆಂಗಳೂರಿನ ನಾಲ್ಕು ಕಡೆ ನಾಲ್ಕು ದ್ವಾರಗಳ ನಿರ್ಮಿಸಿದ್ದರು. ಇಂದು ಬೆಂಗಳೂರು ಎಲ್ಲ ಜನಾಂಗಗಳ ಹೆಚ್ಚಿನ ವಾಸಸ್ಥಾನವಾಗಿದೆ ಎಂದರು.

ಅನೇಕ ಸಾಮಾಜಿಕ ಸುಧಾರಣೆಗಳಲ್ಲಿ ತೊಡಗಿಕೊಂಡ ಇವರು ಅಂದಿನ ಕಾಲದಲ್ಲಿ ಅವಿವಾಹಿತ ಹೆಣ್ಣು ಮಕ್ಕಳಿಗೆ ಕೈ ಬೆರಳುಗಳನ್ನು ಕತ್ತರಿಸುವ ಅನಿಷ್ಟ ಪದ್ಧತಿಯನ್ನು ನಿಲ್ಲಿಸಿದ್ದು ದೊಡ್ಡ ಸಾಧನೆ. ಕೆರೆಕಟ್ಟೆಗಳ ನಿರ್ಮಾಣ ದೇವಾಲಯ ನಿರ್ಮಾಣ ಸೇರಿದಂತೆ ಅನೇಕ ಜನ ಉಪಯೋಗಿ ಕೆಲಸ ಕಾರ್ಯಗಳನ್ನು ಕೈಗೊಂಡು ಇತಿಹಾಸದಲ್ಲಿ ನಮ್ಮ ಸ್ಥಾನವನ್ನು ಶಾಶ್ವತವಾಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಂಪೇಗೌಡರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಸಂಚಾಲಕಿ ಡಾ.ಭಾರತಿ , ಎನ್.ಎಸ್ ಎಸ್ ಅಧಿಕಾರಿ ಸಂತೋಷ, ಐಕ್ಯೂಎಸ್‌ಸಿ ಸಂಚಾಲಕ ಡಾ.ಉಮೇಶ್, ಗ್ರಂಥ ಪಾಲಕಿ ಶ್ರೀಮತಿ ವಿಜಯಲಕ್ಷ್ಮಿ, ಅಧೀಕ್ಷಕ ತಿಮ್ಮಪ್ಪ, ಉಪನ್ಯಾಸಕರು ಉಪಸ್ಥಿತರಿದ್ದರು.ಕೆಂಪೇಗೌಡರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

ಮಳವಳ್ಳಿ:ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಯುವಕ ಮಿತ್ರರು, ರಕ್ತದಾನಿಗಳ ಒಕ್ಕೂಟ, ಮಿಮ್ಸ್ ರಕ್ತಕೋಶ, ಮಂಡ್ಯ ಆರೋಗ್ಯ ಇಲಾಖೆ ಮಳವಳ್ಳಿ ಆಶ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಶಿಬಿರದಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ಸಲ್ಲಿಸಿದರು.ಅಪರ ಜಿಲ್ಲಾಧಿಕಾರಿ ಡಾ.ನಾಗರಾಜು ರಕ್ತದಾನ ಶಿಬಿರಕ್ಕೆ ಭೇಟಿ ಕೊಟ್ಟು ಯಶಸ್ವಿಗೆ ಶುಭ ಕೋರಿದರು. ಯುವಕರು ರಕ್ತದಾನ ಮಾಡುವುದರ ಮೂಲಕ ಮತ್ತೊಬ್ಬರ ಜೀವ ಉಳಿಸುವ ಪುಣ್ಯವನ್ನು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.

ಚಲನಚಿತ್ರ ನಿರ್ದೇಶಕ ಉಮಾಪತಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವು ಗಣ್ಯರು ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಶುಭ ಕೋರಿದರು.ಪಟ್ಟಣದ ಪುರಸಭೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುರಸಭೆ ಸದಸ್ಯರು ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.