ಬೆಂಗಳೂರು ಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ವೈಶಾಲಿ

| Published : Jun 28 2024, 12:47 AM IST

ಬೆಂಗಳೂರು ಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು: ಜಿಲ್ಲಾಧಿಕಾರಿ ವೈಶಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಉದ್ಘಾಟಿಸಿ, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗದಗ: ಬೆಂಗಳೂರು ನಗರವನ್ನು ಕಟ್ಟುವಲ್ಲಿ ಕೆಂಪೇಗೌಡರ ಕೊಡುಗೆ ಬಹಳ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡ ಅವರು ಸುಭದ್ರವಾದ ಬೆಂಗಳೂರು ನಿರ್ಮಾಣದ ಜತೆಯಲ್ಲಿಯೇ ಜನಪರ ಕಾರ್ಯಗಳನ್ನು ಕೈಗೊಂಡರು. ಬಾಲ್ಯದಲ್ಲಯೇ ಚುರುಕಾಗಿದ್ದ ಕೆಂಪೇಗೌಡ ಅವರು ಗುರುಕುಲದಲ್ಲಿ ಸಾಮಾನ್ಯ ಶಿಕ್ಷಣದ ಜತೆಗೆ ರಾಜನೀತಿ, ಆರ್ಥಿಕ ತಿಳಿವಳಿಕೆ, ಕುಸ್ತಿ, ಯುದ್ಧ ಕಲೆಗಳನ್ನು ಕಲಿತಿದ್ದರು. ವಿಜಯನಗರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡ ಅವರಿಗೆ ಎಲ್ಲ ವೈಭವಗಳನ್ನು ಪುನರ್ ಪ್ರತಿಷ್ಠಾಪಿಸುವ ಬಯಕೆ ಇತ್ತು. ಅವರು ರಾಜಧಾನಿ ಕಟ್ಟಿದ ಆನಂತರ ಅಲ್ಲಿ 4 ಮಹಾದ್ವಾರಗಳನ್ನು ರಚಿಸಿದರು. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು, ಅವರ ವೃತ್ತಿಗಳಿಗನುಸಾರವಾಗಿ ಅಕ್ಕಿಪೇಟೆ, ರಾಗಿ ಪೇಟೆ, ಕುಂಬಾರ ಪೇಟೆ, ಉಪ್ಪಾರ ಪೇಟೆ, ಬಳೆ ಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿಕೊಟ್ಟರು ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಅವರು ಉತ್ತಮ ಕೃಷಿ ಚಟುವಟಿಕೆಗೆ ಹಾಗೂ ಗೃಹ ಬಳಕೆಗಾಗಿ ವಿವಿಧ ಕೆರೆಗಳನ್ನು ಕಟ್ಟಿಸಿದರು. ಧಾರ್ಮಿಕ ಪ್ರತೀಕವಾಗಿ ದೇವಸ್ಥಾನಗಳನ್ನು ಕಟ್ಟಿಸಿದರು. ವಿವಿಧ ಉದ್ಯಾನಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲು ಕೆಂಪೇಗೌಡ ಅವರ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರ ಆದರ್ಶಗಳು ಇಂದು ಎಲ್ಲರಿಗೂ ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್‌ ಬಬರ್ಜಿ, ಜಿಪಂ ಸಿಇಒ ಭರತ್ ಎಸ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.