ಗುಣಮಟ್ಟದ ಶಿಕ್ಷಣಕ್ಕೆ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ ಪ್ರಾರಂಭ: ಶೋಭಾ ಕರಂದ್ಲಾಜೆ

| Published : Feb 21 2024, 02:07 AM IST

ಗುಣಮಟ್ಟದ ಶಿಕ್ಷಣಕ್ಕೆ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ ಪ್ರಾರಂಭ: ಶೋಭಾ ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಗುಣಮಟ್ಟದ ಶಿಕ್ಷಣ ಮತ್ತು ರಾಷ್ಟ್ರೀಯ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತೇಗೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳು ಗುಣಮಟ್ಟದ ಶಿಕ್ಷಣ ಮತ್ತು ರಾಷ್ಟ್ರೀಯ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಮಂಗಳವಾರ ತೇಗೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರೀಯ ವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ವರ್ಗಾಯಿಸಿ ಶಿಕ್ಷಣ ನೀಡಲಾಗುತ್ತದೆ. ಇದರಿಂದಾಗಿ ಆ ವಿದ್ಯಾರ್ಥಿಗಳ ಜ್ಞಾನ ವಿಕಸನವಾಗುತ್ತದೆ, ಅವರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಣ ದೊರೆಯುತ್ತದೆ. ಇಲ್ಲಿ ಯಾವುದೇ ಜಾತಿ ಧರ್ಮ ಶ್ರೀಮಂತ ಬಡವ ಎಂಬ ಭೇದಭಾವ, ಯಾವುದೇ ಶಿಫಾರಸು ಇಲ್ಲದೆ ಲಾಟರಿ ಮತ್ತು ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸೀಟು ನೀಡಲಾಗುತ್ತದೆ. ವರ್ಷಕ್ಕೆ ಕೇವಲ 5-6 ಸಾವಿರ ರು.ಗಳಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು. 2014 ರಲ್ಲಿ ತಾವು ಲೋಕಸಭಾ ಸದಸ್ಯರಾದಾಗ ಕೇಂದ್ರೀಯ ವಿದ್ಯಾಲಯ ನೀಡುವಂತೆ ಬೇಡಿಕೆ ಇಟ್ಟಿದೆ, ಇದುವರೆಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯಗಳು ಇರಲಿಲ್ಲ. ಈಗ ಆ ಎರಡು ಜಿಲ್ಲೆಗಳಲ್ಲೂ ಕೇಂದ್ರೀಯ ವಿದ್ಯಾಲಯಗಳಾಗಿವೆ. ಮೊದಲು ಉಡುಪಿಗೆ ವಿದ್ಯಾಲಯ ಸಿಕ್ಕಿತು ಚಿಕ್ಕಮಗಳೂರಿನಲ್ಲಿ ಭೂಮಿ ತಡವಾಗಿ ಸಿಕ್ಕಿದ್ದರಿಂದ ಒಂದು ವರ್ಷದ ನಂತರ ಕೇಂದ್ರೀಯ ವಿದ್ಯಾಲಯ ತೆರೆಯಲಾಯಿತು ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದಿಂದ ಇಂದು ದೇಶದ 25 ಕೇಂದ್ರೀಯ ವಿದ್ಯಾಲಯಗಳನ್ನು ಉದ್ಘಾಟಿಸಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಚಿಕ್ಕಮಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಎರಡೆರಡು ತರಗತಿಗಳನ್ನು ಆರಂಭಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಪಿಯು ತರಗತಿ ಆರಂಭಿಸಲಾಗುವುದು, ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿ ಬರದಿಂದ ಸಾಗಿದ್ದು ಸಧ್ಯದಲ್ಲೇ ಅದನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮೂಡಿಗೆರೆ ಚಿಕ್ಕಮಗಳೂರು ರಸ್ತೆ ಅಭಿವೃದ್ಧಿಗೆ 400 ಕೋಟಿ ರು. ಅನುಮೋದನೆ ನೀಡಿದ್ದಾರೆ. ಆ ಹಣದಲ್ಲಿ ಚಿಕ್ಕಮಗಳೂರು ಬೇಲೂರು ರೈಲ್ವೆ ಕಾಮಗಾರಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುವುದು, ಇಡೀ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚು ಅನುದಾನ ತರಲಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಕೇಂದ್ರದಿಂದ ತರಲಾಗುವುದು ಎಂಬ ಭರವಸೆ ನೀಡಿದರು. ಇಲ್ಲಿನ ಕೇಂದ್ರೀಯ ವಿದ್ಯಾಲಯ ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಆ ವೇಳೆ ಬಹಳಷ್ಟು ಅನಾನುಕೂಲ ವಾಗಿತ್ತು, ಇದೀಗ ಉತ್ತಮ ಕಟ್ಟಡ ನಿರ್ಮಾಣವಾಗಿದೆ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಶ್ರದ್ಧೆ ಯಿಂದ ವಿದ್ಯಾರ್ಜನೆ ಮಾಡಿ ದೊಡ್ಡ ದೊಡ್ಡ ಸ್ಥಾನಗಳಿಗೆ ಹೋಗುವ ಮೂಲಕ ವಿದ್ಯಾಲಯದ ಕೀರ್ತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಮೂಡಿಗೆರೆ ಶಾಸಕಿ ನಯನ ಮೋಟಮ್ಮಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಿ ಅದರ ನೂತನ ಕಟ್ಟಡವನ್ನು ಪ್ರಧಾನ ಮಂತ್ರಿಗಳೇ ಉದ್ಘಾಟಿಸಿರುವುದು ಅತ್ಯಂತ ಸಂತಸ, ಹೆಮ್ಮೆ ತಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಕೇಂದ್ರಿಯ ವಿದ್ಯಾಲಯದ ಉಪ ಆಯುಕ್ತ ಧಮೇಂದ್ರ ಪಟ್ಲೆ ಉಪಸ್ಥಿತರಿದ್ದರು. 20 ಕೆಸಿಕೆಎಂ 1ಚಿಕ್ಕಮಗಳೂರು ಹೊರ ವಲಯದ ತೇಗೂರಿನ ನೂತನ ಕೇಂದ್ರೀಯ ವಿದ್ಯಾಲಯದ ಕಟ್ಟಡಗಳ ಸಮಾರಂಭವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಡಿಸಿ ಮೀನಾ ನಾಗರಾಜ್‌ ಇದ್ದರು.