ಕೆಂಗಲ್ ಹನುಮಂತಯ್ಯ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೋತವರು !

| Published : Apr 09 2024, 12:52 AM IST

ಸಾರಾಂಶ

ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಯಾದ ಮೇಲೆ ಹನುಮಂತಯ್ಯನವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿದರು. ಕಾಫಿ ಮಂಡಳಿ ಸದಸ್ಯರಾದರು, ಅಖಿಲ ಭಾರತ ವಿವೇಕಾನಂದ ಸ್ಮಾರಕ ಸಮಿತಿಯ ಮೈಸೂರು ರಾಜ್ಯ ಶಾಖೆಯ ಅಧ್ಯಕ್ಷರಾದರು. 1966ರಲ್ಲಿ ಕೆನಡಾದ ಒಟ್ಟಾವದಲ್ಲಿ ನಡೆದ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾರತೀಯ ನಿಯೋಗದ ನಾಯಕರಾಗಿ ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಕರ್ನಾಟಕ ಏಕೀಕರಣಕ್ಕಾಗಿ ನಿಸ್ವಾರ್ಥವಾಗಿ ಹೋರಾಟ ನಡೆಸಿದ ಹಾಗೂ ವಿಧಾನಸೌಧದ ನಿರ್ಮಾತೃವೂ ಆದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಲೋಕಸಭಾ ಚುನಾವಣೆಯಲ್ಲಿ ಮೂರು ಬಾರಿ ಗೆದ್ದು, ಒಮ್ಮೆ ಸೋಲು ಕಂಡವರು.

ಮೂಲತಃ ರಾಮನಗರ ತಾಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದವರಾದ ಕೆಂಗಲ್ ಹನುಮಂತಯ್ಯರವರು, 1952 ರಿಂದ 1956ರವರೆಗೆ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದವರು. ಆನಂತರ ಕೇಂದ್ರ ಸರ್ಕಾರದಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿದವರು.

1952ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಕೆಂಗಲ್ ಹನುಮಂತಯ್ಯರವರು 1956ರ ಆಗಸ್ಟ್ ವರೆಗೆ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಮರು ಚುನಾವಣೆಯಲ್ಲಿ ಅಂದರೆ 1957ರ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಭಾರಿ ಪ್ರಯತ್ನ ನಡೆದರೂ ಹೆಚ್ಚಿನ ಬಹುಮತದಿಂದಲೇ ಚುನಾಯಿತರಾದರು.

44 ವರ್ಷಗಳ ಪ್ರಾಯಕ್ಕೆ ಮುಖ್ಯಮಂತ್ರಿಗಳಾದ ಕೆಂಗಲ್ ರವರು ಭಾರತದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿಗಳಾದವರ ಸಾಲಿಗೆ ಸೇರಿದರು. ಅವರ ದೂರದೃಷ್ಟಿಯಿಂದಲೇ ಭವ್ಯವಾದ ವಿಧಾನಸೌಧ ನಿರ್ಮಾಣಗೊಂಡಿತು.

ಆದರೆ, ಅದರ ಉದ್ಘಾಟನೆಯ ವೇಳೆಗೆ ಅವರು ಅಧಿಕಾರ ಕಳೆದುಕೊಂಡಿದ್ದರು.

1962ರವರೆಗೆ ಹೆಚ್ಚಿನ ಜವಾಬ್ದಾರಿಗಳಿಲ್ಲದೆ ಶಾಸಕರಾಗಿಯೇ ಕಳೆದರು. ಆನಂತರ 1962ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದರು. ಕೆಂಗಲ್ ಹನುಮಂತಯ್ಯರವರು ಲೋಕಸಭೆ ಪ್ರವೇಶಿಸಿದ್ದು ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು. ಅವರು ಭಾರತ ಕಂಡ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿ ರೂಪುಗೊಂಡರು. ಆಡಳಿತ ಪಕ್ಷದಲ್ಲಿದ್ದರೂ ಪ್ರಧಾನಿ ನೆಹರೂರವರ ಕ್ರಮ ಪ್ರಶ್ನಿಸಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಯಾದ ಮೇಲೆ ಹನುಮಂತಯ್ಯನವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿದರು. ಕಾಫಿ ಮಂಡಳಿ ಸದಸ್ಯರಾದರು, ಅಖಿಲ ಭಾರತ ವಿವೇಕಾನಂದ ಸ್ಮಾರಕ ಸಮಿತಿಯ ಮೈಸೂರು ರಾಜ್ಯ ಶಾಖೆಯ ಅಧ್ಯಕ್ಷರಾದರು. 1966ರಲ್ಲಿ ಕೆನಡಾದ ಒಟ್ಟಾವದಲ್ಲಿ ನಡೆದ ಕಾಮನ್ ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾರತೀಯ ನಿಯೋಗದ ನಾಯಕರಾಗಿ ಭಾಗವಹಿಸಿದರು.

1967ರ ಸಂಸತ್ ಚುನಾವಣೆಯಲ್ಲಿ ಮರು ಆಯ್ಕೆಯಾದ ಅವರು, ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿ ಉಪನಾಯಕರಾಗಿ ಚುನಾಯಿತರಾದರು. ಭಾರತ ಸರ್ಕಾರ ರಚಿಸಿದ್ದ ಆಡಳಿತ ಸುಧಾರಣಾ ಆಯೋಗದಲ್ಲಿ ಮೊದಲು ಸದಸ್ಯರಾಗಿ ಮತ್ತು ಆನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1969ರಲ್ಲಿ ಬಾರ್ಸಿಲೋನದಲ್ಲಿ ನಡೆದ ಆಡಳಿತ ವಿಜ್ಞಾನ ಸಮ್ಮೇಳನದಲ್ಲಿ ಭಾರತೀಯ ನಿಯೋಗದ ನಾಯಕರಾಗಿ ಭಾಗವಹಿಸಿದ್ದರು.

1969ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆ ಕಂಡಿತು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಗೆ ಆಡಳಿತ ಕಾಂಗ್ರೆಸ್ ಎಂದು ಹೆಸರಾಯಿತು. ಹನುಮಂತಯ್ಯರವರು ಆಡಳಿತ ಕಾಂಗ್ರೆಸ್ ನಲ್ಲಿ ಉಳಿದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದರು. 1970ರಲ್ಲಿ ಕೇಂದ್ರ ಸರ್ಕಾರದ ಕಾನೂನು ಮತ್ತು ಸಮಾಜ ಕಲ್ಯಾಣ ಖಾತೆ ಸಚಿವರಾದರು. ಸರ್ಕಾರ ಅವರನ್ನು ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯದ ಸದಸ್ಯರನ್ನಾಗಿ ನೇಮಿಸಿತು. ಕಾನೂನು ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡರು. 1970ರಲ್ಲಿ ಮನಿಲಾದಲ್ಲಿ ನಡೆದ ಏಷ್ಯಾ ದೇಶಗಳ ಸಮಾಜ ಕಲ್ಯಾಣ ಸಚಿವರ ಸಮ್ಮೇಳನದಲ್ಲಿ ಅದರ ಉಪಾಧ್ಯಕ್ಷರಾಗಿ ಚುನಾಯಿತರಾದರು.

1971ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ಕಾನೂನು ಸಚಿವರ, ಅಟಾರ್ನಿ ಜನರಲ್ ಗಳ ಮತ್ತು ಸಾಲಿಸಿಟರ್ ಜನರಲ್ ಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತೀಯ ನಿಯೋಗದ ನಾಯಕರಾಗಿ ಹನುಮಂತಯ್ಯ ಭಾಗವಹಿಸಿದರು. ಆ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಅದೇ ವರ್ಷ (1971) ನಡೆದ ಸಂಸತ್ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಕೇಂದ್ರ ರೈಲ್ವೆ ಸಚಿವರಾಗಿ ಒಂದೂವರೆ ವರ್ಷದ ಅವಧಿಯಲ್ಲಿ ರೈಲ್ವೆ ಕ್ಷೇತ್ರದಲ್ಲಿನ ಕುಂದು ಕೊರತೆ ಸರಿಪಡಿಸಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡು ಪ್ರಖ್ಯಾತಿ ಪಡೆದರು.

ಹನುಮಂತಯ್ಯರವರು ತಮ್ಮ 65ನೇ ವಯಸ್ಸಿಗೆ ಸರ್ಕಾರದಲ್ಲಿ ಹೊಂದಿದ್ದ ದೊಡ್ಡ ಜವಾಬ್ದಾರಿ ಸ್ಥಾನಗಳಿಂದ ದೂರವಾದರು. 1977ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದರು. ಅದು ಕೆಂಗಲ್ ಹನುಮಂತಯ್ಯರವರು ತಮ್ಮ ಸಾರ್ವಜನಿಕ ಜೀವನದಲ್ಲಿ ಕಂಡ ಮೊದಲ ಮತ್ತು ಕೊನೆಯ ಸೋಲಾಗಿತ್ತು.

ತವರು ಕ್ಷೇತ್ರದಿಂದ ಸ್ಪರ್ಧಿಸದ ಹನುಮಂತಯ್ಯ:

1951ರಿಂದ 1967ರವರೆಗೆ ರಾಮನಗರ ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ, ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ಮತ್ತು ಮಾಗಡಿ ತಾಲೂಕುಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದವು. 1957ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಜಿಲ್ಲೆಯ ತಾಲೂಕುಗಳು 1962ರ ಚುನಾವಣೆವರೆಗೂ ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದವು. 1967ರಲ್ಲಿ ಕನಕಪುರ, ಸಾತನೂರು, ಚನ್ನಪಟ್ಟಣ, ಮಾಗಡಿ, ರಾಮನಗರ, ಆನೇಕಲ್ , ಕುದೂರು, ನೆಲಮಂಗಲ ವಿಧಾನಸಭಾ ಕ್ಷೇತ್ರ ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಆದರೂ ಕೆಂಗಲ್ ಹನುಮಂತಯ್ಯನವರು ಬೆಂಗಳೂರು ನಗರ ಕ್ಷೇತ್ರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಟ್ಟು ತವರು ಕ್ಷೇತ್ರ ಕನಕಪುರದಿಂದ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ.

‘ಲೋಕ’ ಚುನಾವಣೆಯಲ್ಲಿ ಹನುಮಂತಯ್ಯ:

ಬೆಂಗಳೂರು ನಗರ ಸಂಸತ್ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕೆಂಗಲ್ ಹನುಮಂತಯ್ಯನವರು ಬೆಂಗಳೂರು ದಕ್ಷಿಣ ಸಂಸತ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. 1957ರಲ್ಲಿ ಕೇಶವ ಅಯ್ಯಂಗಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ನಗರ ಕ್ಷೇತ್ರದಿಂದ 1962ರಲ್ಲಿ ಕೆಂಗಲ್ ಹನುಮಂತಯ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿ.ಎಸ್ .ನಟರಾಜನ್ (57,489ಮತ) ವಿರುದ್ಧ 60,539 ಮತಗಳ ಅಂತರದಿಂದ ಹನುಮಂತಯ್ಯ (1,18,028ಮತ) ಗೆಲುವು ಸಾಧಿಸಿದರು. 1967ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿ.ಸುಬ್ರಮಣ್ಯ 80,194 ಮತ ಪಡೆದರೆ, ಕಾಂಗ್ರೆಸ್ ನ ಕೆಂಗಲ್ ಹನುಮಂತಯ್ಯ 1,30,814 ಮತ ಪಡೆದು 50,620 ಮತಗಳ ಅಂತರದಿಂದ ವಿಜೇತರಾದರು. 1971ರಲ್ಲಿ ಕಾಂಗ್ರೆಸ್ ನ ಕೆಂಗಲ್ ಹನುಮಂತಯ್ಯರವರು 1,81,819 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಭಾರತೀಯ ಜನ ಸಂಘದ ಎಂ.ಗೋಪಾಲ್ ಕೃಷ್ಣ ಅಡಿಗ (77,789) ಅವರನ್ನು 1,04,030ಮತಗಳ ಅಂತರದಿಂದ ಸೋಲಿಸಿದರು. ಈ ಚುನಾವಣೆಯಲ್ಲಿ ಒಟ್ಟು 14 ಮಂದಿ ಸ್ಪರ್ಧೆ ಮಾಡಿದ್ದರು. 1977ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ನ ಕೆಂಗಲ್ ಹನುಮಂತಯ್ಯ (1,80,809ಮತ)ರವರು ಎದುರಾಳಿಯಾಗಿದ್ದ ಭಾರತೀಯ ಲೋಕದಳ ಅಭ್ಯರ್ಥಿ ಕೆ.ಎಸ್ .ಹೆಗಡೆ (2,21,974) ವಿರುದ್ಧ 41,165 ಮತಗಳ ಅಂತರದಿಂದ ಪರಾಭವಗೊಂಡರು.