ಮನೆ ಬಳಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೇರಳಿಗರ ಗೂಂಡಾಗಿರಿ

| Published : Nov 25 2025, 04:15 AM IST

ಮನೆ ಬಳಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೇರಳಿಗರ ಗೂಂಡಾಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಕೇರಳ ಮೂಲದ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಕೇರಳ ಮೂಲದ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಬಸಿಲ್ ವರ್ಗೀಸ್(24), ತರಸ್ ರಾಜಿ(25) ಹಾಗೂ ಸಂದೀಪ್ ಮಹಾದೇವ್‌(23) ಬಂಧಿತರು. ಆರೋಪಿಗಳೆಲ್ಲರೂ ವಿದ್ಯಾರ್ಥಿಗಳಾಗಿದ್ದಾರೆ. ಅಜರ್‌ ಅಹ್ಮದ್‌ ಹಲ್ಲೆಗೊಳಗಾದ ಯುವಕ.

ಕಳೆದ ಅ.21 ರ ರಾತ್ರಿ 9.30 ರ ಸುಮಾರಿಗೆ ಮೂವರು ಆರೋಪಿಗಳು, ದೂರುದಾರ ಅಜರ್‌ ಅಹ್ಮದ್‌ ಮನೆ ಮುಂದಿನ ರಸ್ತೆಯಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿಗಳು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೂರುದಾರರು ಅ.21 ರಂದು ಮನೆಯಿಂದ ಊಟ ಮುಗಿಸಿಕೊಂಡು ನಡೆದುಕೊಂಡು ಹೋಗುವಾಗ, ಅಲ್ಲಿ ಮೂವರು ಅಪರಿಚಿತರು ಯಾವುದೋ ಕೆಲಸಕ್ಕೆ ಬಂದಿದ್ದರು. ಅವರು ಟ್ರಿಪ್‌ ಹೋಗುವ ಸಲುವಾಗಿ ಜೂಮ್ ಕಾರನ್ನು ಬುಕ್ ಮಾಡಿಕೊಂಡು ಅಲ್ಲಿ ಪಿಕ್​ಅಪ್​ಗೆ ಬಂದಿದ್ದರು. ಈ ವೇಳೆ ದೂರುದಾರರು ತಮ್ಮ ಮನೆಯ ಬಳಿ ಕಾರನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದರು. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿತ್ತು. ಈ ವೇಳೆ ದೂರುದಾರನ ಮೇಲೆ ಮನಸೋಇಚ್ಛೆ ಥಳಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ತಿಳಿಸಿದ್ದಾರೆ.