ಸಾರಾಂಶ
ಯಲ್ಲಾಪುರ:
ಏತ ನೀರಾವರಿ ಯೋಜನೆ ಜಾರಿಯಿಂದ ಕೃಷಿಕರಿಗೆ ಅನುಕೂಲವಾಗಲಿದ್ದು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಈ ಯೋಜನೆಗೆ ಅನುದಾನ ಪಡೆಯಲು (₹ 8.40 ಕೋಟಿ) ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಹೊಸಳ್ಳಿಯಲ್ಲಿ ಮಂಗಳವಾರ ಕೃಷಿ ಜಮೀನುಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಏತ ನೀರಾವರಿ ಯೋಜನೆಯ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.ಈ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ತೀವ್ರ ನೀರಿನ ಕೊರತೆ ಇರುವುದನ್ನು ಗಮನಿಸಿ ಈ ಯೋಜನೆ ಜಾರಿಗೊಳಿಸಲಾಯಿತು. ₹ ೩.೭೫ ಕೋಟಿ ನೆರವಿನಿಂದ ಕೆರೆಹೊಸಳ್ಳಿ ಭಾಗಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಕಂಚನಳ್ಳಿ ಪ್ರದೇಶಕ್ಕೂ ₹ ೨.೮೦ ಕೋಟಿ ಮಂಜೂರಿ ಮಾಡಿ, ಟೆಂಡರ್ ಕರೆಯಲಾಗಿದೆ. ಅಲ್ಲದೇ ₹ ೧.೮೦ ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮಾಡುವ ಕೆಲಸ ಸೇರಿದಂತೆ ವಿವಿಧ ಕಾಮಗಾರಿಗಳು ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವಾಗ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ತೊಡಕುಗಳು ಬರುತ್ತವೆ. ಆದರೂ ಅಧಿಕಾರಿಗಳ ಸಹಕಾರದಿಂದ ಎಲ್ಲ ಕಾರ್ಯ ಮಾಡಲಾಗುತ್ತಿದೆ. ಪ್ರಸ್ತುತ ಬೆಳಗಾವಿ ವಿಭಾಗದಲ್ಲಿ ಇಷ್ಟೊಂದು ಪ್ರಮಾಣದ ಹಣ ಇದೊಂದೇ ಕಾಮಗಾರಿಗೆ ಬಿಡುಗಡೆಯಾಗಿದೆ ಎಂದ ಅವರು, ಇಲ್ಲಿ ಅತ್ಯಧಿಕ ಶಕ್ತಿಯ ಬೃಹತ್ ಪಂಪ್ ಅಳವಡಿಸಲಾಗಿದೆ. ಇದು ಕೆಡದಂತೆ ಗ್ರಾಮಸ್ಥರ ಸಮಿತಿ ರಚಿಸಲಾಗಿದ್ದು, ಅವರ ನೇತೃತ್ವದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಿಕೊಳ್ಳುವಂತಾಗಬೇಕು. ಯೋಜನೆ ಕೇವಲ ಅನುಷ್ಠಾನಗೊಂಡರೆ ಸಾಲದು. ಅದು ಬಹು ವರ್ಷ ಉಳಿಯುವಂತಾಗಬೇಕು ಎಂದರು.ಡಬ್ಗುಳಿ ಹಳ್ಳಕ್ಕೂ ಇದೇ ರೀತಿ ಅಣೇಕಟ್ಟು ನಿರ್ಮಿಸಿ, ಅರಬೈಲ್, ಮೊಗದ್ದೆ ಸೇರಿದಂತೆ ವಿವಿಧ ಪ್ರದೇಶದ ೨೪೦ ಎಕರೆ ಕೃಷಿ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶಾಸಕರು ಸಾಕಷ್ಟು ಪರಿಶ್ರಮ, ಹೋರಾಟ ನಡೆಸಿ ಈ ಯೋಜನೆಗೆ ಹಣ ತಂದಿದ್ದಾರೆ. ಇದನ್ನು ಅರಿತುಕೊಂಡು ಗ್ರಾಮಸ್ಥರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಸಣ್ಣ ನೀರಾವರಿ ಇಲಾಖೆಯ ಸ.ಕಾ.ನಿ ಅಭಿಯಂತರರಾದ ಆರ್.ಎಂ. ದಫೇದಾರ, ಅವಿನಾಶ ಆಲೂರು, ಸಹಾಯಕ ಅಭಿಯಂತರ ಆರ್.ಎನ್. ನಾಯ್ಕ, ಅಂತರ್ಜಲ ಅಭಿವೃದ್ಧಿ ಅಧಿಕಾರಿ ಸಂತೋಷ ಶೆಟ್ಟಿ, ಬಿಜೆಪಿಯ ಸ್ಥಳೀಯ ಘಟಕಾಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಸಿದ್ದಿ ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಈ ಬೃಹತ್ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸದಿರುವ ಕುರಿತು ಆಕ್ಷೇಪಗಳು ಕೇಳಿಬಂದವು. ಆದರೆ ಅವರಿಗೆ ಸರಿಯಾದ ಆಮಂತ್ರಣವೂ ತಲುಪಿಲ್ಲವೆಂದು ತಿಳಿದುಬಂತು.ಸ್ಥಳೀಯ ಮುಖಂಡ ಡಿ.ಜಿ. ಭಾಗ್ವತ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಅರುಣ ನಾಯ್ಕ ನಿರ್ವಹಿಸಿದರು.