ಸಾರಾಂಶ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ
ಕನ್ನಡಪ್ರಭ ವಾರ್ತೆ ಉಡುಪಿಯಕ್ಷಗಾನ ಕಲಾ ಸೌರಭವನ್ನು ಜಗದಗಲಕ್ಕೆ ಪಸರಿಸಿ ಈ ಮೂಲಕ ತನ್ನ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೆರೆಮನೆ ಶಂಭು ಹೆಗಡೆ ಯಕ್ಷಗಾನ ಅಭಿಮಾನಿಗಳಿಗೆ ನಿತ್ಯ ಸ್ಮರಣೀಯರು. ಅವರ ಸಾಧನೆಯ ಹಾದಿಯನ್ನೇ ಅನುಸರಿಸಿಕೊಂಡು ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೆ ತನ್ನದೇ ಕೊಡುಗೆ ನೀಡುತ್ತಿರುವ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಅವರ ಕುಟುಂಬ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಹೊನ್ನಾವರ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ 90ನೇ ವರ್ಷದ ಸಂಭ್ರಮೋತ್ಸವ ಹಾಗೂ 9 ದಿನ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.ಭಾರತೀಯ ಕಲಾಪ್ರಕಾರಗಳಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವ ಯಕ್ಷಗಾನಕ್ಕೆ ಸುಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 90 ವರ್ಷಗಳ ಹಿಂದೆ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಮುಂದೆ ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಅವರಿಂದ ವಿಸ್ತಾರಗೊಂಡು, ಇದೀಗ ಐದನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನದಲ್ಲಿ ಸಾಂಪ್ರಾದಾಯಿಕ ಶೈಲಿ ಹಾಗೂ ಪರಂಪರೆಯ ಚೌಕಟ್ಟನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿರುವುದು ಕಲಾಭಿಮಾನಿಗಳಿಗೆ ಅತೀವ ಸಂಭ್ರಮ ತಂದಿದೆ. ಈ ಮಂಡಳಿಗೆ 90 ತುಂಬುತ್ತಿರುವ ಸುಸಂದರ್ಭದಲ್ಲಿ ಯೂನೆಸ್ಕೋ ಮನ್ನಣೆಗೆ ಪ್ರಾಪ್ತವಾಗಿರುವುದು ಯಕ್ಷಲೋಕಕ್ಕೆ ಸಂದ ಗೌರವ ಎಂದು ಹೇಳಿದರು.ಯಕ್ಷಗಾನವನ್ನು ಮಕ್ಕಳಿಗೆ ದಾಟಿಸಬೇಕು. ಅವರಿಗೆ ಯಕ್ಷಗಾನ ತರಬೇತಿ ನೀಡಿ ಭವಿಷ್ಯದ ಕಲಾವಿದರು, ಪ್ರೇಕ್ಷಕರನ್ನು ಸೃಷ್ಟಿಸಬೇಕು ಎಂಬುದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿ ನನ್ನ ಚಿಂತನೆಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿಸುವ ಸಂಘಸಂಸ್ಥೆಗಳಿಗೆ ಅಕಾಡೆಮಿಯ ನೆರವನ್ನು ನೀಡಲಾಗುತ್ತಿದೆ. ಸರ್ಕಾರ ನೀಡುವ ಅನುದಾನವನ್ನು ಇಂತಹ ಸಂಘಸಂಸ್ಥೆಗಳಿಗೆ ಮುಟ್ಟಿಸುವುದಲ್ಲದೆ, ಯಕ್ಷಗಾನಕ್ಕೆ ಅಪೂರ್ವ ಕೊಡುಗೆಯನ್ನು ನೀಡಿ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದೇ ಅಕಾಡೆಮಿಯ ಉದ್ದೇಶವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಹಾಸ್ಯಗಾರ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸುನೀಲ್ ನಾಯ್ಕ, ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಹಾಸ್ಯಗಾರ, ನರಸಿಂಹ ಹೆಗಡೆ, ಮೊದಲಾದವರು ಉಪಸ್ಥಿತರಿದ್ದರು. ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಸಾಲೇಬೈಲು ಕಾರ್ಯಕ್ರಮದ ಸಮಗ್ರ ಅವಲೋಕ ನೀಡಿದರು.ಕಾರ್ಯಕ್ರಮದ ರುವಾರಿ ಕೆರೆಮನೆ ಶಿವಾನಂದ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.