ಕೆಸರನಹಳ್ಳಿಯ ಸ್ವಚ್ಛತೆ ಮರೆತ ಗ್ರಾಪಂ

| Published : May 16 2024, 12:52 AM IST / Updated: May 16 2024, 12:53 AM IST

ಸಾರಾಂಶ

ತಾಲೂಕು ಕೇಂದ್ರದಿಂದ ಸುಮಾರು 3 ಕಿ.ಮೀ. ಹತ್ತಿರದಲ್ಲಿರುವ ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರವೂ ಹೌದು, ಗ್ರಾಮದಲ್ಲಿ ನೈರ್ಮಲ್ಯ ಮಾಯವಾಗಿದೆ, ಚರಂಡಿಗಳು ತ್ಯಜ್ಯಗಳಿಂದ ತುಂಬಿಕೊಂಡಿದ್ದರೂ ಸ್ವಚ್ಛಗೊಳಿಸಲು ನಿರ್ಲಕ್ಷ್ಯ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣಕ್ಕೆ ಅಂಟಿಕೊಂಡಿದ್ದರೂ ಕೇಸರನಹಳ್ಳಿ ಗ್ರಾಮ ಮೂಲಭೂತ ಸೌಕರ್ಯಗಳ ಕೊರತೆ, ಸ್ವಚ್ಛತೆ ಕಾಣದ ಚರಂಡಿಗಳು ಮತ್ತು ಎಲ್ಲೆಂದರಲ್ಲಿ ಕಸದ ರಾಶಿಯಿಂದ ಕೂಡಿದ್ದು ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭಿತಿ ಉಂಟಾಗಿದೆ. ತಾಲೂಕು ಕೇಂದ್ರದಿಂದ ಸುಮಾರು 3 ಕಿ.ಮೀ. ಹತ್ತಿರದಲ್ಲಿರುವ ಕೆಸರನಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರವೂ ಹೌದು, ಗ್ರಾಮದಲ್ಲಿ ನೈರ್ಮಲ್ಯ ಮಾಯವಾಗಿದೆ, ಮಳೆ ಹಾಗೂ ಕೊಳಚೆ ನೀರು ಹರಿಯಲು ನಿರ್ಮಾಣ ಮಾಡಿರುವ ಚರಂಡಿಯಲ್ಲಿ ತ್ಯಾಜ್ಯಗಳಿಂದ ತುಂಬಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಪಂಚಾಯತಿ ಅಧಿಕಾರಿಗಳು ಇಲ್ಲ ಸದಸ್ಯರು ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲ.

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಪಂಚಾಯತಿ ಕೇಂದ್ರವಿರುವ ಗ್ರಾಮದಲ್ಲೆ ಸಮಸ್ಯೆಗಳು ತಾಂಡವಾಡುತ್ತಿದ್ದರೂ ಗ್ರಾಮಸ್ಥರ ಕಷ್ಟ ಕೇಳಲು ಇಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಚರಂಡಿಗಳಲ್ಲಿ ಗಿಡಗಳು, ಹುಲ್ಲು ಬೆಳೆದಿದ್ದು ಮತ್ತು ಚರಂಡಿಗಳನ್ನು ಸ್ವಚ್ಛತೆಗೂಳಿಸದ ಕಾರಣ ಒಳಚರಂಡಿ ತುಂಬ ಕಸದಿಂದ ಕೂಡಿದ್ದು ಗಬ್ಬುನಾರುತ್ತಿದೆ.

ಮಳೆಗಾಲ ಶುರುವಾಗಿರುವ ಕಾರಣ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದ ಕಾರಣ ಮನೆಗಳಿಗೆ ನೀರು ನುಗ್ಗುತಿದೆ ಎಂದು ಗ್ರಾಮಸ್ಥರು ಪಂಚಾಯತಿ ವಿರುದ್ಧ ಕಿಡಿಕಾರಿದ್ದಾರೆ. ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿಯ ಕಾರ್ಯಾಲಯ ಇದ್ದರೂ ಸಹ ಚರಂಡಿಗಳನ್ನು ಸ್ವಚ್ಛಗೊಳಿಸುಲು ಮತ್ತು ಕಸವನ್ನು ಸಂಗ್ರಹಿಸಲು ಮುಂದಾಗದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಡೆಗಣಿಸಿರುವುದರಿಂದ ಇಡೀ ಗ್ರಾಮವೇ ದುರ್ನಾತದಿಂದ ಕೂಡಿದೆ.

ಕಸ ಸಂಗ್ರಹಿಸುವ ವಾಹನ ಇದ್ದರೂ ಕಸವನ್ನು ಸಂಗ್ರಹಿಸುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಇದರಿಂದ ಸೊಳ್ಳೆಗಳು ಹಾವಳಿಯೂ ಹೆಚ್ಚಾಗಿದೆ. ಗ್ರಾಪಂ ಸದಸ್ಯರು ಇಷ್ಟು ದಿನ ಲೋಕಸಭೆ ಚುನಾವಣೆ ಗುಂಗಿನಲ್ಲಿದ್ದರು. ಈಗಲಾದರೂ ಗ್ರಾಮಗಳ ಸಮಸ್ಯೆಗಳ ಕಡೆ ಗಮನಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೋಟ್.........ನಾನು ಕೆಸರನಹಳ್ಳಿ ಪಂಚಾಯ್ತಿ ಪಿಡಿಒ ಆಗಿ ಹೆಚ್ಚುವರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಗ್ರಾಮದ ಸಮಸ್ಯೆಗಳ ಬಗ್ಗೆ ಈಗಷ್ಟೇ ಗಮನಕ್ಕೆ ಬಂದಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ಕ್ರಮವಹಿಸುವೆ.

- ಶಂಕರ್, ಗ್ರಾಪಂ ಪಿಡಿಒ.