ಸಾರಾಂಶ
ಮಂಗಳೂರು : ಕೆಲ ಸಮಯದ ಹಿಂದೆ ಕುಡುಪುವಿನಲ್ಲಿ ಗುಂಪು ದಾಳಿಯಿಂದ ಹತ್ಯೆಗೀಡಾದ ಕೇರಳದ ಅಶ್ರಫ್ ಹೆತ್ತವರಿಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಬೇಕೆಂದು ಕೇರಳದಲ್ಲಿ ವ್ಯಾಪಕ ಒತ್ತಾಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಬದಲಿಗೆ ರಾಜ್ಯದ ಮುಸ್ಲಿಂ ಮುಖಂಡರಾದ ಯು.ಟಿ. ಖಾದರ್ ಹಾಗೂ ಜಮೀರ್ ಅಹ್ಮದ್ ಖಾನ್ ತಮ್ಮ ಕೈಯಾರೆ 15 ಲಕ್ಷ ರು. ಸಹಾಯಧನ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಸರ್ಕಾರಿ ನಿವಾಸದಲ್ಲಿ ಅಶ್ರಫ್ ತಂದೆ- ತಾಯಿಗೆ ಸಹಾಯಧನ ಹಸ್ತಾಂತರಿಸಲಾಯಿತು.
ಈ ಸಂದರ್ಭ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡ ಜಿ.ಎ. ಬಾವ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಅಶ್ರಫ್ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಯಿತು. ಅಲ್ಲದೆ ಅಶ್ರಫ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿ ಚರ್ಚೆ ನಡೆಯಿತು.
ಬಳಿಕ ಮಾನವೀಯತೆ ನೆಲೆಯಲ್ಲಿ ತಮ್ಮ ವೈಯುಕ್ತಿಕ ಖಾತೆಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ 10 ಲಕ್ಷ ರು. ಹಾಗೂ ಯು.ಟಿ. ಖಾದರ್ 5 ಲಕ್ಷ ರು. ಪರಿಹಾರದ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು.
ಅಶ್ರಫ್ ಕುಟುಂಬಸ್ಥರೊಂದಿಗೆ ಮಲಪ್ಪುರಂ ಕಾಂಗ್ರೆಸ್ ಮುಖಂಡರಾದ ನಾಸಿರ್ ವೆಂಗರ ಮತ್ತಿತರರಿದ್ದರು.