ಸಾರಾಂಶ
ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರವನ್ನು ಅಜ್ಜಂಪೀರ್ ಖಾದ್ರಿ ವಾಪಸ್ ಪಡೆದಿದ್ದಾರೆ. ಖಾದ್ರಿ ಬಂಡಾಯದಿಂದ ನಿದ್ದೆಗೆಟ್ಟಿದ್ದ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಹಾವೇರಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಬಡಾಯವೆದ್ದು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರವನ್ನು ಅಜ್ಜಂಪೀರ್ ಖಾದ್ರಿ ವಾಪಸ್ ಪಡೆದಿದ್ದಾರೆ. ಖಾದ್ರಿ ಬಂಡಾಯದಿಂದ ನಿದ್ದೆಗೆಟ್ಟಿದ್ದ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಶಿಗ್ಗಾಂವಿ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಯಾಸೀರ್‌ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಕಂಗಾಲಾದ ಕೈ ನಾಯಕರು ಅಂದೇ ಖಾದ್ರಿ ಸಂಧಾನ ಆರಂಭಿಸಿದ್ದರು. ಖಾದ್ರಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಚಿವ ಜಮೀರ್ ಅಹ್ಮದ್ ಅವರನ್ನೇ ಸಂಧಾನದ ನೇತೃತ್ವಕ್ಕೆ ಬಿಡಲಾಗಿತ್ತು. ಬೆಂಗಳೂರಿಗೆ ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿಸಿ ಸಂಧಾನ ಮಾತುಕತೆ ನಡೆಸಲಾಗಿತ್ತು. ಇಬ್ಬರೂ ನಾಯಕರು ನಾಮಪತ್ರ ಹಿಂಪಡೆಯುವಂತೆ ಒತ್ತಡ ಹಾಕಿದ್ದರು. ಅಂತೂ ಸಂಧಾನಕ್ಕೆ ಮಣಿದು ನಾಮಪತ್ರ ವಾಪಸ್ ಪಡೆಯುವುದಾಗಿ ಖಾದ್ರಿ ಹೇಳಿದ್ದರು. ಆದರೂ ಕೈ ನಾಯಕರು ಶಿಗ್ಗಾಂವಿ ಕ್ಷೇತ್ರಕ್ಕೆ ಅವರನ್ನು ಕಳುಹಿಸದೇ ಬೆಂಗಳೂರಿನಲ್ಲೇ ಇರಿಸಿಕೊಂಡಿದ್ದರು. ಒಂದೇ ದಿನದಲ್ಲಿ ತಮ್ಮ ಹೇಳಿಕೆ ಬದಲಿಸಿ, ಬೆಂಬಲಿಗರ ಅಭಿಪ್ರಾಯ ಪಡೆದು ನಿರ್ಧಾರ ಮಾಡುವುದಾಗಿ ಹೇಳಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಮತ್ತೆ ಆತಂಕ ಶುರುವಾಗಿತ್ತು. ಬುಧವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ್ದರಿಂದ ಖಾದ್ರಿ ನಡೆ ಭಾರಿ ಕುತೂಹಲ ಕೆರಳಿಸಿತ್ತು.ಭದ್ರತೆಯಲ್ಲಿ ಕ್ಷೇತ್ರಕ್ಕೆ ಬಂದ ಖಾದ್ರಿ
ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಮಂಗಳವಾರ ರಾತ್ರಿ ಹುಬ್ಬಳ್ಳಿಗೆ ಬಂದಿದ್ದ ಖಾದ್ರಿ, ಬುಧವಾರ ಬೆಳಗ್ಗೆ ತಡಸ ಕ್ರಾಸ್‌ನಲ್ಲಿರುವ ಯಾತ್ರಿ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸುವವರಿದ್ದರು. ಸಚಿವ ಜಮೀರ್ ಅಹ್ಮದ್ ಅವರು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಖಾದ್ರಿ ಅವರನ್ನು ಕರೆದುಕೊಂಡು ತಡಸ ಯಾತ್ರಿ ನಿವಾಸಕ್ಕೆ ಆಗಮಿಸಿದ್ದರು. ತಡಸ ಗ್ರಾಮದಲ್ಲಿ ಖಾದ್ರಿ ಅವರ ನೂರಾರು ಬೆಂಬಲಿಗರು ಜಮಾಯಿಸಿ ಖಾದ್ರಿ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನ ಕೊಟ್ಟೇ ಅವರ ನಾಮಪತ್ರ ಹಿಂತೆಗೆಸಬೇಕು ಎಂದು ಪಟ್ಟು ಹಿಡಿದರು. ಆಗ ತಮ್ಮ ಬೆಂಬಲಿಗರನ್ನು ಕಂಡು ಖಾದ್ರಿ ಕಣ್ಣೀರು ಹಾಕಿದರು. ಆಗ ಸಚಿವ ಜಮೀರ್ ಅಹ್ಮದ್ ಅವರು ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಏನೂ ಘೋಷಣೆ ಮಾಡಲು ಬರಲ್ಲ, ಮುಂದೆ ಸೂಕ್ತ ಅಧಿಕಾರ ನೀಡುತ್ತೇವೆ ಎಂದು ಬೆಂಬಲಿಗರಿಗೆ ಭರವಸೆ ನೀಡಿದರು.ಖಾದ್ರಿ ಕಾಲಿಗೆ ಬಿದ್ದ ಪಠಾಣ:
ತಡಸದಿಂದ ನೇರವಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಖಾದ್ರಿ ಅವರು ಚುನಾವಣಾಧಿಕಾರಿಗಳಿಂದ ನಾಮಪತ್ರವನ್ನು ಹಿಂಪಡೆದರು. ಬಳಿಕ ತಹಸೀಲ್ದಾರ್ ಕಚೇರಿ ಹೊರಭಾಗದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಖಾದ್ರಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.ಗುರು-ಶಿಷ್ಯರುಪಠಾಣ ಹಾಗೂ ನಮ್ಮ ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿ ಇಲ್ಲ, ಜಮೀರ್ ಅಹ್ಮದ್ ಅವರ ಮುಂದೆ ನಮ್ಮ ಕಾರ್ಯಕರ್ತರು ತಮ್ಮ ನೋವು ತೋಡಿಕೊಂಡಿದ್ದು, ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ. ನಾನು ಪಠಾಣಗೆ ಗುರು, ಪಠಾಣ್ ನನ್ನ ಶಿಷ್ಯ. ನಾವು ಗುರು-ಶಿಷ್ಯರು. ಯಾಸೀರ್‌ಖಾನ್ ಪಠಾಣ ಮುಖದಲ್ಲಿ ಸಿದ್ದರಾಮಯ್ಯ ಅವರನ್ನು ನೋಡಿ ಗೆಲ್ಲಿಸಿಕೊಂಡು ಬರುತ್ತೇನೆ.
ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ