ಗಾಂಜಾ ವ್ಯಸನಿಗಳಿಗೆ ಖಾಕಿ ಟ್ರೀಟ್‌ಮೆಂಟ್‌!

| Published : Aug 15 2024, 01:46 AM IST

ಸಾರಾಂಶ

ಕಳೆದ ಒಂಸೂವರೆ ತಿಂಗಳ ಹಿಂದೆಯಷ್ಟೇ ನಾಗರಿಕರು ಇಲ್ಲಿ ಪೊಲೀಸ್‌ ವ್ಯವಸ್ಥೆ ಹದಗೆಟ್ಟಿದೆ. ನಾಗರೀಕರಿಗೆ ಸುರಕ್ಷತೆಯೇ ಇಲ್ಲ. ಪ್ರತಿನಿತ್ಯ ಕಳ್ಳತನ, ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಪೊಲೀಸ್‌ ಕಮಿಷನರೇಟ್‌ ಅನ್ನು ಟೀಕಿಸುತ್ತಿದ್ದರು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

119 ಕೇಸ್‌; 580ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್‌... ಮಾದಕ ವಸ್ತುಗಳ ವ್ಯಸನಿಗಳಿಗೆ ಟ್ರೀಟ್‌ಮೆಂಟ್‌..!

ಇದು ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ 40 ದಿನಗಳಲ್ಲಿ (ಜು.4ರಿಂದ ಆ.13ರ ವರೆಗೆ) ಪೊಲೀಸ್‌ ಕಮಿಷನರೇಟ್‌ ನಡೆಸಿರುವ ಕಾರ್ಯವೈಖರಿಯ ಒಂದು ಝಲಕ್‌.

ಕಳೆದ ಒಂಸೂವರೆ ತಿಂಗಳ ಹಿಂದೆಯಷ್ಟೇ ನಾಗರಿಕರು ಇಲ್ಲಿ ಪೊಲೀಸ್‌ ವ್ಯವಸ್ಥೆ ಹದಗೆಟ್ಟಿದೆ. ನಾಗರೀಕರಿಗೆ ಸುರಕ್ಷತೆಯೇ ಇಲ್ಲ. ಪ್ರತಿನಿತ್ಯ ಕಳ್ಳತನ, ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಪೊಲೀಸ್‌ ಕಮಿಷನರೇಟ್‌ ಅನ್ನು ಟೀಕಿಸುತ್ತಿದ್ದರು. ಅದರಲ್ಲೂ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯ ನಂತರವಂತೂ ನಾಗರಿಕರ ಆಕ್ರೋಶ ಮತ್ತಷ್ಟು ಹೆಚ್ಚಿತ್ತು. ಪ್ರತಿಭಟನೆಗಳು ಕೂಡ ನಡೆದಿದ್ದವು.

ಕೊನೆಗೆ ಸರ್ಕಾರ ನಾಗರಿಕರ ಒತ್ತಡಕ್ಕೆ ಮಣಿದು ಕಮಿಷನರ್‌ ..... ಅವರನ್ನು ಬದಲಿಸಿತು. ಎನ್‌. ಶಶಿಕುಮಾರ ಪೊಲೀಸ್‌ ಕಮಿಷನರ್‌ ಆಗಿ ಆಗಮಿಸಿದ ಬಳಿಕ ಇಲ್ಲಿನ ಕಾನೂನು ಸುವ್ಯವಸ್ಥೆಯ ಚಿತ್ರಣವೇ ಬದಲಿಸಿದೆ. ಈ ವರೆಗೂ ಪೊಲೀಸ್‌ ಕಮಿಷನರ್‌ ಮಾಡದ ಕೆಲವೊಂದಿಷ್ಟು ಕ್ರಮ ಕೈಗೊಳ್ಳುವ ಮೂಲಕ ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುತ್ತಿದ್ದಾರೆ.

ಗಾಂಜಾಕ್ಕೆ ಅಮಲಿಗೆ ಬ್ರೇಕ್‌:

ಅಪರಾಧ ಪ್ರಕರಣಗಳಿಗೆಲ್ಲ ಬಹುತೇಕ ಗಾಂಜಾ ಸೇರಿದಂತೆ ಮಾದಕ ವಸ್ತುಗಳೇ ಕಾರಣ ಎಂಬುದನ್ನು ಮನದಟ್ಟು ಮಾಡಿಕೊಂಡು ಕಮಿಷನರ್‌ ಮೊದಲಿಗೆ ಇವುಗಳಿಗೆ ಕಡಿವಾಣ ಹಾಕಲು ಯೋಚಿಸಿದರು. ಗಾಂಜಾ ಮಾರಾಟ, ಖರೀದಿಸುವವರ ವಿರುದ್ಧ ಸಮರವನ್ನೇ ಸಾರಿದರು. ನಿತ್ಯ, ನಿರಂತರ ಎಂಬಂತೆ ಪ್ರತಿದಿನ ದಾಳಿ ನಡೆಸಿ 40 ದಿನಗಳಲ್ಲಿ 119 ಪ್ರಕರಣ ಭೇದಿಸಿ 580ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್‌ ದಾಖಲಿಸಿದರು.

ಮೊದಲೆಲ್ಲ ಪೊಲೀಸರು ದಾಳಿ ನಡೆಸಿದರೂ 900 ಗ್ರಾಂಕ್ಕಿಂತ ಹೆಚ್ಚು ಸಿಗುತ್ತಲೇ ಇರಲಿಲ್ಲ. ಆದರೆ ಕಮಿಷನರ್‌ ಶಶಿಕುಮಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪ್ರತಿಸಲವೂ 1 ಕೆಜಿ ಮೇಲ್ಪಟ್ಟೆ ಗಾಂಜಾ ವಶಪಡಿಸಿಕೊಂಡಿರುವುದು ವಿಶೇಷ.

ಈ ವರೆಗೆ 14.12 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದರೆ, ಅದರಲ್ಲಿ ₹ 9.79 ಲಕ್ಷ ಮೌಲ್ಯದ 10.42 ಕೆಜಿ ಗಾಂಜಾ ಇದ್ದರೆ, ₹ 65 ಸಾವಿರ ಮೌಲ್ಯದ 3.54 ಕೆಜಿ ಪಪ್ಪೆಸ್ಟ್ರಾ, ₹ 55 ಸಾವಿರ ಮೌಲ್ಯದ 154 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ಒಟ್ಟು ₹ 10.99 ಲಕ್ಷ ಮೌಲ್ಯದ ಮಾದಕ ವಸ್ತು ಪಡಿಸಿಕೊಂಡಂತಾಗಿದೆ. ಇನ್ನು ರಾಜಸ್ಥಾನ, ಗೋವಾ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಪೆಡ್ಲರ್‌ಗಳನ್ನು ಬಂಧಿಸಿರುವುದು ವಿಶೇಷ. ಮಾದಕ ವಸ್ತುಗಳ ಮಾರಾಟ ಮಾಡುವ ಹಾಗೂ ಖರೀದಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ವ್ಯಸನಿಗಳಿಗೆ ಪಾಠ:

ಇನ್ನು ಊರ ಹೊರವಲಯಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಎಣ್ಣೆ ಪಾರ್ಟಿ ಮಾಡುವ, ಸಿಗರೇಟ್‌ ಸೇದುವ ಯುವ ಸಮೂಹವನ್ನು ಹಿಡಿದು ಅವರಿಗೆ ಮಾನಸಿಕ ರೋಗಗಳ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಲಾಗುತ್ತಿದೆ. ಇದಕ್ಕಾಗಿ ವಾರಕ್ಕೆ ಮೂರು ದಿನ ಕಮಿಷನರೇಟ್‌ ಮೀಸಲಿಟ್ಟಿದೆ. ಜತೆಗೆ ವ್ಯಸನಿಗಳ ಪಾಲಕರನ್ನು ಕರೆದು ಅವರ ಮುಂದೆಯೇ ಮಕ್ಕಳಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತಿರುವುದು ವಿಶೇಷ. ಈ ಮೂಲಕ ಪೊಲೀಸ್‌ ಇಲಾಖೆ ಸಾಮಾಜಿಕ ಕಳಕಳಿಯನ್ನು ವ್ಯಕ್ತ ಪಡಿಸುತ್ತಿರುವುದು ನಾಗರಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವೆನಿಸಿದೆ. ಬರೀ ಇದಷ್ಟೇ ಅಲ್ಲ. ಮೊದಲು ನಡೆಯುತ್ತಿದ್ದ ಮಾಂಸಾಹಾರ ಖಾನಾವಳಿಗಳಲ್ಲಿನ ಮದ್ಯ ಸೇವನೆಗೂ ಕಡಿವಾಣ ಬಿದ್ದಂತಾಗಿದೆ.

ಒಟ್ಟಿನಲ್ಲಿ ಮಹಾನಗರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲಾಗುತ್ತಿದೆ. ಆದರೆ ಇದು ಬರೀ ಆರಂಭ ಶೂರತ್ವದಂತೆ ಆಗದೇ ನಿತ್ಯ ನಿರಂತರವಾಗಿ ನಡೆಯಬೇಕು. ಜತೆಗೆ ರಾಜಕೀಯ ವ್ಯಕ್ತಿಗಳು ಪೊಲೀಸ್‌ ಇಲಾಖೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪವನ್ನು ಯಾವುದೇ ಕಾರಣಕ್ಕೂ ಮಾಡದೇ ದೂರವೇ ಉಳಿಯಬೇಕು ಎಂಬುದು ಪ್ರಜ್ಞಾವಂತರ ಅಂಬೋಣ