ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಕುಂದಾನಗರಿ ಎಂಬ ಖ್ಯಾತಿ ಹೊಂದಿರುವ ಬೆಳಗಾವಿ ನಗರದಲ್ಲಿ ಗಾಂಜಾ ಘಮಲು ಕೂಡ ಬಡಿಯುತ್ತಿದೆ. ಒಂದೆಡೆ ಗಾಂಜಾ ಸೇರಿ ಮತ್ತಿತರ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೇ ಸಾಗಿದ್ದರೆ, ಮತ್ತೊಂದೆಡೆ ಮಟ್ಕಾ ದಂಧೆ ಜೋರಾಗಿದೆ. ಇದು ಬೆಳಗಾವಿ ನಾಗರಿಕರ ನಿದ್ದೆಗೆಡಿಸಿದೆ. ಆದರೆ ಗಾಂಜಾ ಮಾರಾಟ, ಮಟ್ಕಾ ದಂಧೆ ವಿರುದ್ಧ ಸಮರ ಸಾರಿರುವ ಪೊಲೀಸರು ಬೆಳಗಾವಿಯನ್ನು ನಶೆ ಮುಕ್ತ ನಗರವನ್ನಾಗಿಸಲು ಪಣತೊಟ್ಟಿದ್ದಾರೆ. ಜತೆಗೆ ಅಂತಹ ಕ್ರಿಮಿನಲ್‌ಗಳಲ್ಲಿ ನಡುಕ ಹುಟ್ಟಿಸಿದ್ದಾರೆ.ಕರ್ನಾಟಕ- ಮಹಾರಾಷ್ಟ್ರ- ಗೋವಾ ರಾಜ್ಯಗಳ ಪ್ರಮುಖ ಕೊಂಡಿಯಾಗಿರುವ ಬೆಳಗಾವಿ ನಗರ, ಗಾಂಜಾ ಘಾಟಿಗೆ ನಲುಗಿ ಹೋಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಬಲು ಜೋರಾಗಿರುವುದನ್ನು ಅರಿತ ಖಾಕಿ ಪಡೆ ಅದನ್ನು ತಡೆಗಟ್ಟಲು ಸನ್ನದ್ಧವಾಗಿದೆ. ಕತ್ತಲಾಗುತ್ತಿದ್ದಂತೆ ನಗರದ ವಿವಿಧೆಡೆಗಳಲ್ಲಿ ಗಾಂಜಾ ಘಾಟು ಜೋರಾಗಿರುತ್ತದೆ. ಅತ್ಯಂತ ಭಯಾನಕ ಸಂಗತಿಯೆಂದರೆ ಶಾಲಾ, ಕಾಲೇಜು ಮಕ್ಕಳಿಗೂ ಗಾಂಜಾ ಪೂರೈಕೆಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಖಾಕಿ ಪಡೆ ಮಟ್ಕಾ ದಂಧೆ, ಗಾಂಜಾ ಮಾರಾಟದ ವಿರುದ್ಧ ಸಮರ ಸಾರುವ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರಾಗಿ ಭೂಷಣ ಬೊರಸೆ ಅವರು ಅಧಿಕಾರವಹಿಸಿಕೊಂಡಾಗಿನಿಂದ ನಗರದ ಖಾಕಿ ಪಡೆ ಅಲರ್ಟ್ ಆಗಿದ್ದು, ಸಕ್ರಿಯವಾಗಿದೆ.3 ವರ್ಷದಲ್ಲಿ 40 ಕೆಜಿ ಗಾಂಜಾ ಜಪ್ತಿ:
ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 68 ಪ್ರಕರಣ ದಾಖಲಿಸಿಕೊಂಡಿದ್ದು, 114 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಸುಮಾರು 40 ಕೆಜಿ ಗಾಂಜಾ ಮಾದಕ ವಸ್ತು ಜಪ್ತಿ ಮಾಡಲಾಗಿದೆ. 2023ರಲ್ಲಿ 23 ಪ್ರಕರಣ ದಾಖಲಿಸಿ, 33 ಜನರನ್ನು ಬಂಧಿಸಿ, 12 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿತ್ತು. 2024ರಲ್ಲಿ 25 ಪ್ರಕರಣ ದಾಖಲಿಸಿ, 39 ಜನ ಆರೋಪಿಗಳನ್ನು ಬಂಧಿಸಿ, 11 ಕೆಜಿ ಗಾಂಜಾ ಜಪ್ತಿ ಮಾಡಲಾಗಿತ್ತು. 2025ನೇ ಸಾಲಿನಲ್ಲಿ ಈವರೆಗೆ 20 ಪ್ರಕರಣ ದಾಖಲಿಸಿ, 42 ಜನ ಆರೋಪಿಗಳನ್ನು ಬಂಧಿಸಲಾಗಿದೆ. 17 ಕೆಜಿ ಗಾಂಜಾ ಮತ್ತು 55 ಮಿಲಿ ಗ್ರಾಂ ಸಿಂಥೆಟಿಕ್ ಎಂಬ ಮಾದಕ ವಸ್ತು ಜಪ್ತಿ ಮಾಡಲಾಗಿದೆ.342 ಮಟ್ಕಾ ಕೇಸ್:
ಗಾಂಜಾ ಘಾಟಿನ ಜೊತೆ ಜೊತೆಗೆ ಮಟ್ಕಾ ದಂಧೆ ಕೂಡ ಅವ್ಯಾಹತವಾಗಿ ನಡೆಯುತ್ತ ಬಂದಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪೊಲೀಸರು ಮಟ್ಕಾ, ಜೂಜಾಟಕ್ಕೆ ಸಂಬಂಧಿಸಿದಂತೆ 342 ಪ್ರಕರಣ ದಾಖಲಿಸಿಕೊಂಡಿದ್ದಾರೆ. 2023ರಲ್ಲಿ 123, 2024ರಲ್ಲಿ 124 ಹಾಗೂ 2025ರಲ್ಲಿ ಈವರೆಗೆ 95 ಪ್ರಕರಣ ದಾಖಲಿಸಲಾಗಿದೆ. ಒಟ್ಟು 256 ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅದು ಅಲ್ಲದೇ, ಕೆಲ ಆರೋಪಿಗಳನ್ನು ಗಡಿಪಾರಿಗೂ ಆದೇಶಿಸಲಾಗುತ್ತಿದೆ.ಬೆಳಗಾವಿಯನ್ನು ನಶೆ ಮುಕ್ತ ನಗರವನ್ನಾಗಿ ಮಾಡಬೇಕೆಂಬುದೇ ನಮ್ಮ ಆಶಯ. ಇದಕ್ಕೆ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಶಾಲಾ- ಕಾಲೇಜುಗಳಿಗೆ ಈಗಾಗಲೇ ಪತ್ರ ಬರೆದಿದ್ದೇವೆ. ಆ್ಯಂಟಿ ಡ್ರಗ್ ಕಮಿಟಿಗಳನ್ನು ಶಾಲಾ, ಕಾಲೇಜುಗಳಲ್ಲಿ ರಚಿಸಲಾಗಿದೆ. ಮಾದಕವಸ್ತುಗಳ ಮಾರಾಟ, ಸಾಗಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಮಾಜಘಾತುಕ ಶಕ್ತಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರಾದ ಭೂಷಣ ಬೊರಸೆ ತಿಳಿಸಿದ್ದಾರೆ.