ಅಡುಗೆ ಎಣ್ಣೆ ಕಳ್ಳತನ ಪ್ರಕರಣದ ಪತ್ತೆ ಹಚ್ಚುವಲ್ಲಿ ಖಾಕಿ ಯಶಸ್ವಿ

| Published : May 18 2024, 12:31 AM IST

ಸಾರಾಂಶ

ಬಸವಕಲ್ಯಾಣದಲ್ಲಿ 16 ಲಕ್ಷಕ್ಕೂ ಅಧಿಕ ಮೌಲ್ಯದ ಪ್ರತಿಷ್ಠಿತ ಕಂಪನಿಯ ಅಡುಗೆ ಎಣ್ಣೆ, ಲಾರಿ ಹಾಗೂ ಆರೋಪಿಯನ್ನು ಪೊಲೀಸ್‌ರು ಬಂಧಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಡುಗೆ ಎಣ್ಣೆ ಕಳ್ಳತನ ಪ್ರಕರಣದ ಪತ್ತೆ ಹಚ್ಚುವಲ್ಲಿ ಬಸವಕಲ್ಯಾಣದ ರೌಡಿ ನಿಗೃಹ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ಚಂದ್ರಶೇಖರ, ಸಿಬ್ಬಂದಿ ಶಿವರುದ್ರ ಪಾಟೀಲ್, ಶಿವಾನಂದ ಮೇತ್ರೆ, ಮಂಠಾಳ ವೃತ್ತ ಕಛೇರಿ ರವರೊಂದಿಗೆ ಪ್ರಕರಣದ ಲಾರಿಯ ಮಾಲಿಕನಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ.

ಲಾರಿ ಮಾಲಿಕನು ತಾನು ಮತ್ತು ತನ್ನ ಇಬ್ಬರು ಲಾರಿ ಚಾಲಕರೊಂದಿಗೆ ಸೇರಿಕೊಂಡು ಲಾರಿ ಪಲ್ಟಿ ಮಾಡಿಸಿ ಅದರಲ್ಲಿಯ ಎಣ್ಣೆ ಹಾಳಾಗಿರುತ್ತದೆ ಅಂತ ಹೇಳುವ ಯೋಜನೆ ರೂಪಿಸಿ, ಚಾಲಕರೊಂದಿಗೆ ಸೇರಿಕೊಂಡು ಕಲಬುರಗಿ ಮತ್ತು ಕಮಲಾಪೂರದಲ್ಲಿ ಲಾರಿಯಿಂದ ಎಣ್ಣೆ ಪಾಕೆಟ್ ತೆಗೆದು ಸಾರ್ವಜನಿಕರಿಗೆ 2 ಲಕ್ಷದಷ್ಟು ಬೆಲೆ ಬಾಳುವ ಎಣ್ಣೆ ಮಾರಾಟ ಮಾಡಿ ತಮ್ಮ ಯೋಜನೆಯಂತೆ ಏಪ್ರಿಲ್ 13ರಂದು ಹಳ್ಳಿ ಶಿವಾರದ ಮಂಠಾಳ ಕ್ರಾಸ್ ಹತ್ತಿರ ಲಾರಿ ಪಲ್ಟಿ ಮಾಡಿಸಿ, ಅದರಲ್ಲಿಯ ಅಡುಗೆ ಎಣ್ಣೆಯ ಪಾಕೇಟ್‌ ಕಳ್ಳತನಗೊಂಡಿರುವ ಬಗ್ಗೆ ಸುಳ್ಳು ಪ್ರಕರಣ ದಾಖಲು ಮಾಡಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಅವರಿಂದ 19,550 ರು. ಮೌಲ್ಯದ ಪ್ರತಿಷ್ಠಿತ ಕಂಪನಿಯ ಅಡುಗೆಎಣ್ಣೆ, ಅಡುಗೆ ಎಣ್ಣೆ ಮಾರಾಟದಿಂದ ಸಂಗ್ರಹಿಸಿದ್ದ 2 ಲಕ್ಷ ರು ನಗದು ಹಣ, ಒಂದು ಲಾರಿ ಹೀಗೆ ಒಟ್ಟು 16,19,550 ರು. ಮೌಲ್ಯದ ವಸ್ತು ವಶಪಡಿಸಿ ಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನು ಇಬ್ಬರು ಲಾರಿ ಚಾಲಕರ ದಸ್ತಗಿರಿ ಬಾಕಿ ಇದ್ದು ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.