ಕಾಗೇರಿ ಮುಂದಿವೆ ಖಾನಾಪುರ-ಕಿತ್ತೂರು ಸವಾಲುಗಳು

| Published : Jun 14 2024, 01:14 AM IST / Updated: Jun 14 2024, 11:57 AM IST

Vishweshwar hegde kageri

ಸಾರಾಂಶ

ಕರ್ನಾಟಕ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾಗಿ ಇತಿಹಾಸ ನಿರ್ಮಿಸಿದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭೆ ವ್ಯಾಪ್ತಿಯಲ್ಲಿಯೂ ಹಲವಾರು ಸವಾಲುಗಳಿವೆ.  

 ಖಾನಾಪುರ": ಕರ್ನಾಟಕ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾಗಿ ಇತಿಹಾಸ ನಿರ್ಮಿಸಿದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭೆ ವ್ಯಾಪ್ತಿಯಲ್ಲಿಯೂ ಹಲವಾರು ಸವಾಲುಗಳಿವೆ. ಹೀಗಾಗಿ ಈ ಹಿಂದೆ ನಿರ್ಲಕ್ಷಕ್ಕೆ ಒಳಗಾಗದಂತೆ ಅಭಿವೃದ್ಧಿ ವಿಷಯದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ-ಕಿತ್ತೂರುಗಳನ್ನು ನಿರ್ಲಕ್ಷಿಸಬಾರದು ಎಂದು ಉಭಯ ತಾಲೂಕುಗಳ ಜನತೆ ನೂತನ ಸಂಸದರನ್ನು ಆಗ್ರಹಿಸಿದ್ದಾರೆ.

ಏನೇನು ಸವಾಲುಗಳಿವೆ?:

ಹೀಗಾಗಿ ಎರಡೂ ತಾಲೂಕುಗಳಲ್ಲಿ ಸಮೃದ್ಧ ನೀರಾವರಿ ಸೌಲಭ್ಯ ಒದಗಿಸಬೇಕು, ಸ್ಥಳೀಯರಿಗೆ ಉದ್ಯೋಗ ನೀಡುವ ವಿವಿಧ ಕೈಗಾರಿಕೆಗಳನ್ನು ಆರಂಭಿಸಬೇಕು, ಪ್ರವಾಸೋದ್ಯಮ ಬಲಪಡಿಸಬೇಕು, ಭಾರತ ಸರ್ಕಾರದಿಂದ ಈ ಭಾಗಕ್ಕೆ ಹೊಸ ಯೋಜನೆಗಳು, ಅಗತ್ಯ ಸೌಲಭ್ಯಗಳು, ಮಕ್ಕಳಿಗೆ ಉತ್ತಮ ಶಿಕ್ಷಣ, ಸಮರ್ಪಕ ಆರೋಗ್ಯ, ಸುಸಜ್ಜಿತ ರಸ್ತೆ, ಸಾರಿಗೆ ಮತ್ತಿತರ ಸೇವೆಗಳನ್ನು ಒದಗಿಸಬೇಕೆಂಬ ನಿರೀಕ್ಷೆಯನ್ನು ಉಭಯ ತಾಲೂಕಿನವರು ನೂತನ ಸಂಸದರಿಂದ ಹೊಂದಿದ್ದಾರೆ.

 ಭೌಗೋಳಿಕವಾಗಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಖಾನಾಪುರ ತಾಲೂಕಿನ ಜನತೆ ಮುಖ್ಯವಾಗಿ ಮಾನವ-ವನ್ಯಜೀವಿ ಸಂಘರ್ಷ, ರೈತರ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಣೆ ಮಾಡುವುದು, ಕಾಡಿನಂಚಿನ ಭಾಗದಲ್ಲಿ ಅಭಿವೃದ್ಧಿ ಮಾಡಲು ಅರಣ್ಯ ಇಲಾಖೆ ಆಕ್ಷೇಪಗಳ ಜೊತೆಗೆ ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ, ನಿರುದ್ಯೋಗ, ಕಳಸಾ ಬಂಡೂರಿ, ಮಹದಾಯಿ ಯೋಜನೆ ವಿಳಂಬ, ಇಲ್ಲಿಯ ಜನರು ಉದ್ಯೋಗ ಅರಸಿ ನೆರೆಯ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಬೇಕಿದೆ.

ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆ, ಖಾನಾಪುರ ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆ, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ, ಹೊಸದಾಗಿ ಡಿಪ್ಲೋಮಾ ಮತ್ತು ಇತರೆ ವೃತ್ತಿಪರ ಕಾಲೇಜುಗಳನ್ನು ಆರಂಭಿಸಲು ಕ್ರಮ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಮತ್ತು ಸಾರಿಗೆ ಸೌಲಭ್ಯ ಒದಗಿಸುವುದು ಹಾಗೂ ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಿತ್ತೂರು ತಾಲೂಕಿನ ಜನತೆಯೂ ಮೂಲಭೂತ ಸೌಲಭ್ಯಗಳ ಕೊರತೆ, ಪ್ರವಾಸಿ ತಾಣಗಳ ಅಭಿವೃದ್ಧಿ, ನನೆಗುದಿಗೆ ಬಿದ್ದಿರುವ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗಕ್ಕೆ ಚಾಲನೆ, ಕುಡಿಯುವ ನೀರಿನ ಸಮಸ್ಯೆ, ಆರೋಗ್ಯ ಮತ್ತು ಸಾರಿಗೆ ಸಮಸ್ಯೆ, ಶಿಕ್ಷಣ ಕ್ಷೇತ್ರ ಸುಧಾರಣೆ ಮತ್ತು ಹೊಸದಾಗಿ ಕೈಗಾರಿಕೆಗಳ ಸ್ಥಾಪನೆ, ನಷ್ಟದಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ, ಕೃಷಿಗೆ ನಿರಂತರ ವಿದ್ಯುತ್ ಸೌಲಭ್ಯ, ನೀರಾವರಿ ಯೋಜನೆಗಳಿಗೆ ಉತ್ತೇಜನ ಮತ್ತಿತರ ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯನ್ನು ಹೋಲಿಸಿದರೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ತಾಲೂಕುಗಳು ಪ್ರವಾಸೋದ್ಯಮ, ಶಿಕ್ಷಣ, ಕೈಗಾರಿಕೆ, ಆರೋಗ್ಯ, ಮೂಲಭೂತ ಸೌಲಭ್ಯ, ರೈಲು ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ಹಿಂದೆ ಉಳಿದಿವೆ. ಅಭಿವೃದ್ಧಿಯ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆ ಇಲ್ಲಿಗಿಂತಲೂ ಮುಂದಿದ್ದು, ಇಲ್ಲಿಯವರೆಗೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸದರು ಖಾನಾಪುರ-ಕಿತ್ತೂರು ತಾಲೂಕುಗಳನ್ನು ಕಡೆಗಣಿಸಿದ್ದಾರೆಂಬ ಆರೋಪ ಈ ಭಾಗದ ಮತದಾರರದ್ದು.ಒಟ್ಟಾರೆಯಾಗಿ ಈ ಭಾಗದ ನೂತನ ಸಂಸದರಿಂದ ಖಾನಾಪುರ-ಕಿತ್ತೂರು ಭಾಗದ ಜನತೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಿರೀಕ್ಷೆಗಳನ್ನು ಸಂಸದರು ಯಾವ ರೀತಿ ಸಾಕಾರ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

ಉತ್ತರ ಕನ್ನಡ ಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾವಣೆಯ ಬಳಿಕ ಮೊದಲ‌ ಬಾರಿ ಖಾನಾಪುರ ತಾಲೂಕಿಗೆ ಆಗಮಿಸಲಿದ್ದಾರೆ. ಅವರಿಗೆ ಖಾನಾಪುರ ತಾಲೂಕಿನ ಜನತೆಯ ಬೇಡಿಕೆಗಳ ಬಗ್ಗೆ ವಿವರಿಸಲಾಗುತ್ತದೆ ಮತ್ತು ಬಿಜೆಪಿ ಖಾನಾಪುರ ಬ್ಲಾಕ್ ವತಿಯಿಂದ ಸನ್ಮಾನಿಸಲಾಗುತ್ತದೆ.

-ಪ್ರಮೋದ ಕೊಚೇರಿ, ಬಿಜೆಪಿ ಮುಖಂಡ.

ನೂತನ ಸಂಸದರಿಂದ ಖಾನಾಪುರ ತಾಲೂಕಿನ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರ ಸಂಕಷ್ಟವನ್ನು ಬಗೆಹರಿಸುವ ಕೆಲಸ ನೂತನ ಸಂಸದರಿಂದ ಆಗಬೇಕಿದೆ‌.

-ರಾಜು ಖಾತೇದಾರ, ಕಾಂಗ್ರೆಸ್ ಮುಖಂಡ.

ಇಂದು ಖಾನಾಪುರಕ್ಕೆ ಸಂಸದ ಹೆಗಡೆ

ಖಾನಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಾನಾಪುರ ತಾಲೂಕಿಗೆ ಜೂ.14 ರಂದು ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪಟ್ಟಣದ ತಾಲೂಕು ಪಂಚಾಯತಿ ಸಭಾಗೃಹದಲ್ಲಿ ಆಯೋಜಿಸಿರುವ ತಾಲೂಕುಮಟ್ಟದ ಅಧಿಕಾರಿಗಳ, ಪಿಡಿಒ ಮತ್ತು ಗ್ರಾಮ ಲೆಕ್ಕಿಗರ ಸಭೆಯಲ್ಲಿ ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಅವರೊಡನೆ ಭಾಗವಹಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿರುವ ಸಂಸದರು ಸಭೆಯ ಬಳಿಕ ಪಟ್ಟಣದ ಚೌರಾಶಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಜಾಂಬೋಟಿ ರಸ್ತೆಯ ಶುಭಂ ಗಾರ್ಡನ್ ಸಭಾಗೃಹದಲ್ಲಿ ಆಯೋಜಿಸಿರುವ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.