ಖಂಡಿಗೆ ವಾರ್ಷಿಕ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

| Published : Apr 15 2025, 12:59 AM IST

ಸಾರಾಂಶ

ಚೇಳೈರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ಮೇ 14 ರಿಂದ ಮೇ 16 ರವರೆಗೆ ಜರುಗುವ ವಾರ್ಷಿಕ ಜಾತ್ರ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಖಂಡಿಗೆ ದೈವಸ್ಥಾನದಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷ ತೋಕೂರುಗುತ್ತು ಉದಯಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡಿನಲ್ಲಿ ಎರ್ಮಾಳು ಜೆಪ್ಪು-ಖಂಡೇವು ಅಡೆಪ್ಪು ಖ್ಯಾತಿಯ ಚೇಳೈರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ಮೇ 14 ರಿಂದ ಮೇ 16 ರವರೆಗೆ ಜರುಗುವ ವಾರ್ಷಿಕ ಜಾತ್ರ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಖಂಡಿಗೆ ದೈವಸ್ಥಾನದಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷ ತೋಕೂರುಗುತ್ತು ಉದಯಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಭಟ್ರ ಚಾವಡಿ ನಾಗರಾಜ್ ಭಟ್, ಅಶಿಕ್ ಭಟ್, ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಬಿ ಶೆಟ್ಟಿ, ಕಾರ್ಯದರ್ಶಿ ಚರಣ್ ಕುಮಾರ್, ಕೋಶಾಧಿಕಾರಿ ಸುಧಾಕರ ಶೆಟ್ಟಿ, ದಿವಾಕರ ಸಾಮಾನಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮೇ 14ರಂದು ಬೆಳಗ್ಗೆ ಮೂಲಸ್ಥಾನದಲ್ಲಿ ಶುದ್ಧಕಲಶ, ಗಣಹೋಮ, ಸಂಕ್ರಮಣ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ,ರಾತ್ರಿ ಮಹಾ ಅನ್ನಸಂತರ್ಪಣೆ, 9 ಗಂಟೆಗೆ ಬ್ರಹ್ಮಸ್ಥಾನದಲ್ಲಿ ಬ್ರಹ್ಮರಿಗೆ ತಂಬಿಲ, ಕುಮಾರ ಸಿರಿಗಳ ದರ್ಶನ, ಧರ್ಮದ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಭಂಡಾರ ಮೂಲಸ್ಥಾನ ಹೋಗುವುದು, ಸುಡುಮದ್ದು ಪ್ರದರ್ಶನ, ನಂತರ ಧ್ವಜಾರೋಹಣ, ಮೇ 15ರ ಬೆಳಗ್ಗೆ 5 ಕ್ಕೆ ಧರ್ಮರಸು ಶ್ರೀ ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಂತರ ನಂದಿಗೋಣ ಕುಮಾರ ಸಿರಿಗಳ ಭೇಟಿ, ಬೆಳಗ್ಗೆ 7ಕ್ಕೆ ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ ಸೇವೆ ನಡೆಯಲಿದೆ.

ಅಂದು ಸಂಜೆ 4.30ಕ್ಕೆ ಬಾಕಿಮಾರು ಗದ್ದೆಯಲ್ಲಿ ಚೆಂಡು, 6ಕ್ಕೆ ಜಾರಂದಾಯ, ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಬಾಕಿಲ್ ದಾಂತಿ ಶ್ರೀ ಕೋರ್ದಬ್ಬು ದೈವಸ್ಥಾನದ ಕೋರ್ದಬ್ಬು ಮತ್ತು ಧೂಮಾವತಿ ದೈವದ ಭೇಟಿ ನಡೆಯಲಿದೆ.

ರಾತ್ರಿ 7ಕ್ಕೆ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ , ರಾತ್ರಿ 8ಕ್ಕೆ ಧ್ವಜಾವರೋಹಣ ನಡೆದು ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ. ಮೇ 14ರ ಸಂಜೆ ಯಕ್ಷಮಣಿ ಕಲಾ ತಂಡ ಚೇಳಾಯರು ಇವರಿಂದ ಸುದರ್ಶನ ಗರ್ವ ಭಂಗ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.

15ರಂದು ರಾತ್ರಿ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ತುಳು ನಾಟಕ, ಮೇ 24ರ ರಾತ್ರಿ 9ಕ್ಕೆ ಕಲ್ಕುಡ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.