ಕಲಂ 371 (ಜೆ) ರೂವಾರಿ ಖರ್ಗೆ ಅಭಿನಂದನಾ ಸಮಾರಂಭ

| Published : Feb 19 2024, 01:34 AM IST / Updated: Feb 19 2024, 01:35 AM IST

ಸಾರಾಂಶ

ದೇಶಿಕ ಅಸಮಾನತೆಗಾಗಿ ಹೋರಾಟ ಮಾಡಿ ಈ ಭಾಗಕ್ಕೆ ಕಲಂ 371 (ಜೆ) ವಿಶೇಷ ಸ್ಥಾನಮಾನದ ರೂವಾರಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ಫೆ.20ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ

ಬೀದರ್: ಪ್ರಾದೇಶಿಕ ಅಸಮಾನತೆಗಾಗಿ ಹೋರಾಟ ಮಾಡಿ ಈ ಭಾಗಕ್ಕೆ ಕಲಂ 371 (ಜೆ) ವಿಶೇಷ ಸ್ಥಾನಮಾನದ ರೂವಾರಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ಫೆ.20ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಎಸ್‌.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಾಸ್ತಾವನೆ ಸಲ್ಲಿಸಿದ್ದರು. ಅಂದಿನ ಉಪಪ್ರಧಾನಿಗಳಾದ ಎಲ್‌.ಕೆ.ಅಡ್ವಾಣಿ ಅವರು ಅದನ್ನು ತಿರಸ್ಕರಿಸಿದರು ಎಂದು ಆರೋಪಿಸಿ ನಂತರ ಯುಪಿಎ ಸರ್ಕಾರದಿಂದ ಭರವಸೆ ನೀಡಿ ಕಾರ್ಯರೂಪಕ್ಕೆ ತರಲಾಯಿತು ಎಂದರು.

ಯುಪಿಎ ಸರ್ಕಾರದಲ್ಲಿ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಮಾಜಿ ಸಿಎಂ ಧರಂಸಿಂಗ್‌ ಅವರು ಸಂಸದರಾಗಿದ್ದರು. 2012ರಲ್ಲಿ ಖರ್ಗೆ ಅವರ ಪ್ರಯತ್ನದಿಂದ 371(ಜೆ) ಕಲಂ ತಿದ್ದುಪಡಿಯಾಗಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುತ್ತಲೇ ಇದನ್ನು ಜಾರಿಗೆ ತರಲಾಯಿತು ಹೀಗೆ 371(ಜೆ) ಕಲಂ ತಿದ್ದುಪಡಿಯಾಗಿ ಜಾರಿಗೆ ಬಂದು 10 ವರ್ಷ ಕಳೆಯುತ್ತಿರುವುದರಿಂದ ಇದರ ದಶಮಾನೋತ್ಸವ ಆಯೋಜಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದರಿಂದ ಕಳೆದ 10 ವರ್ಷದಿಂದ ಈ ಭಾಗಕ್ಕೆ ಪ್ರತಿ ವರ್ಷ 3 ಸಾವಿರ ಕೋಟಿ ರು. ಸಿಗುತ್ತಿದೆ, ಉನ್ನತ ಶಿಕ್ಷಣ, ಹುದ್ದೆಗಳಲ್ಲಿ ಮೀಸಲಾತಿ ಸಿಗುತ್ತಿದೆ. ಈ ಸಾಲಿನ ಬಜೆಟ್‌ನಲ್ಲಿ ಈ ಭಾಗಕ್ಕೆ ಸುಮಾರು 5 ಸಾವಿರ ಕೋಟಿ ರು. ನೀಡಲಾಗಿದೆ ಎಂದು ತಿಳಿಸಿದರು.

ಸಾಧನೆಯ ರೂವಾರಿ, ಭದ್ರ ಬುನಾದಿ ಹಾಕಿದವರಾದ ಮಲ್ಲಿಕಾರ್ಜುನ ಖರ್ಗೆ ಬೀದರ್‌ನ ಸುಪುತ್ರರಾಗಿದ್ದು ವಿಶೇಷವಾಗಿ ಅವರು ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ ಜನಿಸಿದ್ದು ಈಗ ಅವರು ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರನ್ನು ಪ್ರಗತಿಪರ, ದಲಿತ ಪರ, ಗೊಂಡ ಪರ ಹೀಗೆ ವಿವಿಧ ಸಮಾಜದ ಪ್ರಮುಖರಿಂಗ ನಾಗರಿಕ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನದಲ್ಲಿ ಕೂಡ ಅನೇಕ ಹುದ್ದೆಗಳ ಮೂಲಕ ತಮ್ಮ 50 ವರ್ಷದ ಸೇವೆ ನಿಭಾಯಿಸಿದ್ದರಿಂದ ಸುವರ್ಣ ಮಹೋತ್ಸವ ಕೂಡ ನಡೆಯಲಿದೆ ಎಂದರು. ಈ ಸಮಾರಂಭದಲ್ಲಿ 50 ಸಾವಿರದಿಂದ 1 ಲಕ್ಷದವರೆಗೆ ಜನರು ಭಾಗವಹಿಸುವರು ಎಂದು ಸಚಿವ ಖಂಡ್ರೆ ತಿಳಿಸಿದರು.

10 ವರ್ಷದಲ್ಲಿ 35 ಸಾವಿರ ಜನರಿಗೆ ಹುದ್ದೆ: ವಿಶೇಷ ಸ್ಥಾನಮಾನದಿಂದ ಈ ಭಾಗದ ಸುಮಾರು 35 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ಪ್ರತಿವರ್ಷ ಕಲ್ಯಾಣ ಕರ್ನಾಟಕ ಭಾಗದ 600ರಿಂದ 700 ಮಕ್ಕಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಪ್ರವೇಶ, ಸಾವಿರಾರು ಮಕ್ಕಳಿಗೆ ತಾಂತ್ರಿಕ ಶಿಕ್ಷಣದಲ್ಲಿ ಪ್ರವೇಶ ಅಲ್ಲದೇ ಅನೇಕ ಜನ ಸರ್ಕಾರಿ ನೌಕರರಿಗೆ ಮುಂಬಡ್ತಿ ಸಿಕ್ಕಿದೆ ಎಂದರು.

ಈ ಭಾಗದಲ್ಲಿ ಸುಮಾರು 40 ಸಾವಿರ ಹುದ್ದೆಗಳು ಖಾಲಿ ಇವೆ. ಸರ್ಕಾರದಿಂದ ಹಿಂದಿನ 3 ಸಾವಿರ ಕೋಟಿ ರು. ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಇದಕ್ಕೆ ಟೆಂಡರ್‌ ಆಗಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರು. ಘೋಷಣೆ ಮಾಡಲಾಗಿದೆ. ಅದರ ಕ್ರಿಯಾ ಯೋಜನೆ ಕೂಡ ಏಪ್ರಿಲ್‌ನಲ್ಲಿ ಮಾಡುತ್ತೇವೆ ಒಂದು ವೇಳೆ ಲೋಕಸಭೆಯ ಚುನಾವಣೆ ಘೋಷಣೆಯಾಗಿದ್ದರೆ ಚುನಾವಣೆಯ ನಂತರ ಮಾಡುತ್ತೇವೆ ಹಾಗಾಗಿ 5 ಸಾವಿರ ಕೋಟಿ ರು.ಗಳನ್ನು 2025ರ ಮಾರ್ಚ್‌ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಮುಗಿಸುತ್ತೇವೆ ಎಂದು ಖಂಡ್ರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪೌರಾಡಳಿತ ಸಚಿವ ರಹೀಮ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದ ಕುಮಾರ ಅರಳಿ, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಮಾಜಿ ಎಂಎಲ್ಸಿ ಕೆ. ಪುಂಡಲಿಕರಾವ್‌, ಅನೀಲಕುಮಾರ ಬೆಲ್ದಾರ, ಮನ್ನಾನ್‌ ಸೇಠ, ಬಸವರಾಜ ಮಾಳಗೆ, ಲಕ್ಷ್ಮಣರಾವ್‌ ಬುಳ್ಳಾ ಇದ್ದರು.