ಸಾರಾಂಶ
ತುಮಕೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತ್ಯಾಗ ಮಾಡುವ ಮನೋಭಾವದ ಬಗ್ಗೆ ಹೇಳಿರುವ ಮಾತು ಅರ್ಥ ಆಗಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ್ದಾರೆ. ಅಂತಹ ತ್ಯಾಗ, ಬಲಿದಾನ ಈಗಿನ ಆಧುನಿಕ ಸಮಾಜದಲ್ಲಿ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ತ್ಯಾಗದ ಮಾತು ಹೇಳಿರಬಹುದು ಎಂದರು.ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ತ್ಯಾಗ ಕಡಿಮೆಯಾಗಿಲ್ಲ, ಇಡೀ ಸಮಾಜದಲ್ಲಿ ತ್ಯಾಗದ ಮನೋಭಾವನೆ ಕಡಿಮೆಯಾಗಿದೆ. ಹಾಗೆಯೇ ಸ್ವಾಭಾವಿಕವಾಗಿ ಕಾಂಗ್ರೆಸ್‌ನಲ್ಲೂ ತ್ಯಾಗ ಮನೋಭಾವ ಕಡಿಮೆಯಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಸ್ತಾಪಿಸಿದಾಗ, ಶ್ರೀಮಠದಲ್ಲಿ ಯಾವುದೇ ರಾಜಕೀಯ ಮಾತನಾಡಲ್ಲ ಎಂದು ಹೇಳುವ ಮೂಲಕ ಸಚಿವ ಪರಮೇಶ್ವರ್ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.ನಿನ್ನೆ ನಡೆದಾಡುವ ದೇವರು ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಗದ್ದುಗೆ ಪೂಜೆ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.
ಡಾ. ಶಿವಕುಮಾರ ಶ್ರೀಗಳ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಅವರನ್ನು ನಾವು ಯಾವತ್ತೂ ಸ್ಮರಿಸಬೇಕು ಎಂದು ಅವರು ತಿಳಿಸಿದರು.ದಾಸೋಹ ದಿನ: ಸಿಎಂ ಜತೆ ಚರ್ಚೆಶ್ರೀಗಳ ಪುಣ್ಯ ಸ್ಮರಣೆ ದಿನವನ್ನು ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸುತ್ತೇನೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ತಿಳಿಸಿದರು.
ದೂರು ಕೊಟ್ಟರೆ ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ. ಜಿ. ಪರಮೇಶ್ವರ್ ಅವರು, ಯಾರು ಸಂತ್ರಸ್ತರು ಇದ್ದಾರೋ ಅವರು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ದೂರು ಕೊಟ್ಟರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಈಗಾಗಲೇ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ತಡೆಯಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಮೈಕ್ರೋ ಫೈನಾನ್ಸ್ ನವರು ಗೈಡ್‌ಲೈನ್ಸ್ ಉಲ್ಲಂಘನೆ ಮಾಡಿ ತಪ್ಪು ಮಾಡುತ್ತಿದ್ದಾರೆ. ಪರವಾನಗಿ ಇಲ್ಲದವರ ಬಗ್ಗೆಯೂ ಹಣಕಾಸು ಇಲಾಖೆ ಸರ್ವೆ ಮಾಡಬೇಕಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಖಚಿತ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಒ ಪ್ರಭು ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.