ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ತನಿಖೆ ನಡೆಸುವ ಅವಶ್ಯಕತೆ ಇಲ್ಲ. ಘೋಷಣೆ ಕೂಗಿದವರನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಶಿಕಾರಿಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಘೋಷಣೆ ಕೂಗಿದವನನ್ನು ಅಲ್ಲೇ ಒದ್ದು, ಒಳಗೆ ಹಾಕುತ್ತಿದ್ದರು.
ಘೋಷಣೆ ಕೂಗಿದ ಜಾಗದಲ್ಲೇ ಅಷ್ಟೊಂದು ಕ್ಯಾಮರಾಗಳಿವೆ. ಯಾರು ಕೂಗಿದ್ದಾರೆ ಎಂದು ಟಿವಿ ಮಾಧ್ಯಮಗಳು ದೃಶ್ಯಾವಳಿಗಳ ಸಹಿತ ಸುದ್ದಿ ಬಿತ್ತರಿಸಿವೆ. ಇದರಲ್ಲಿ ತನಿಖೆ ಮಾಡುವುದು ಏನಿದೆ ಎಂದು ಪ್ರಶ್ನಿಸಿದರು.
ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೋರಾಟಕ್ಕೆ ಇಳಿಯಬೇಕಾ? ದೇಶದ್ರೋಹಿಗಳನ್ನು ಹಿಡಿಯಿರಿ ಅಂದ್ರೆ, ದೇಶದ್ರೋಹಿಗಳ ವಿರುದ್ಧ ದನಿ ಎತ್ತಿದವರ ವಿರುದ್ಧ ಕ್ರಮ ತೆಗೆದುಕೊಳ್ತಿರಾ? 5 ಗ್ಯಾರಂಟಿಗಳ ಜೊತೆ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ 6ನೇ ಗ್ಯಾರಂಟಿ ಸೇರಿಸಿಕೊಂಡಿದ್ದಾರೆ. ತಪ್ಪಿತಸ್ಥರನ್ನು ನಿರಪರಾಧಿ ಎಂದು ಹೇಳುತ್ತಿರುವುದು ಖಂಡನೀಯ ಎಂದು ಹರಿಹಾಯ್ದರು.
ಈ ಕುರಿತು ಬಿಜೆಪಿ ನಿನ್ನೆಯೇ ಹೋರಾಟ ನಡೆಸಿದೆ. ನಾಸಿರ್ ಹುಸೇನ್ ನಡವಳಿಕೆಯನ್ನು ಇಡೀ ರಾಜ್ಯದ ಜನರು ಗಮನಿಸಿದ್ದಾರೆ. ಅವರು ಆಯ್ಕೆಯಾದ ಮರುಕ್ಷಣವೇ ಈ ರೀತಿ ನಡೆದಿದೆ ಎಂದರೆ, ಮುಂದೆ ಇನ್ನೇನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ.
ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಡಿಸಿಎಂ ಅವರಿಗೆ ಕ್ಲೀನ್ ಚಿಟ್ ನೀಡುವುದು, ಗೃಹಮಂತ್ರಿ ಏನು ಆಗೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇದು ರಾಜ್ಯದ ಜನರು ತಲೆತಗ್ಗಿಸುವ ಕೆಲಸ ಎಂದು ಟೀಕಿಸಿದರು.
ಹೆಬ್ಬಾರ್, ಎಸ್ಟಿಎಸ್ ವಿರುದ್ಧ ಕೇಂದ್ರ ನಾಯಕರು ಕ್ರಮ
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್ ಹಾಗೂ ಮತದಾನದಿಂದ ಹಿಂದೆ ಸರಿದ ಶಿವರಾಂ ಹೆಬ್ಬಾರ್ ವಿರುದ್ಧ ಕೇಂದ್ರದ ನಾಯಕರು ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.