ಮುಖ್ಯಾಧಿಕಾರಿ, ವಿಪಕ್ಷ ನಾಯಕನಿಗೆ ಕಿಕ್ ಬ್ಯಾಕ್: ಆರೋಪ

| Published : Nov 20 2025, 12:00 AM IST

ಸಾರಾಂಶ

ರಾಮನಗರ: ಬಿಡದಿ ಪುರಸಭೆಯಲ್ಲಿನ ಹೊರ ಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆಗೆ ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ವಿಪಕ್ಷ ನಾಯಕ ಸಿ.ಉಮೇಶ್ ಕಿಕ್ ಬ್ಯಾಕ್ ಪಡೆದಿದ್ದು, ಇವರ ವಿರುದ್ಧ ಲೋಕಾಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸುವುದಾಗಿ ಪುರಸಭೆ ಅಧ್ಯಕ್ಷೆ ಬಾನುಪ್ರಿಯಾ ತಿಳಿಸಿದರು.

ರಾಮನಗರ: ಬಿಡದಿ ಪುರಸಭೆಯಲ್ಲಿನ ಹೊರ ಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆಗೆ ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ವಿಪಕ್ಷ ನಾಯಕ ಸಿ.ಉಮೇಶ್ ಕಿಕ್ ಬ್ಯಾಕ್ ಪಡೆದಿದ್ದು, ಇವರ ವಿರುದ್ಧ ಲೋಕಾಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸುವುದಾಗಿ ಪುರಸಭೆ ಅಧ್ಯಕ್ಷೆ ಬಾನುಪ್ರಿಯಾ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿ.ಉಮೇಶ್ ಅವರೊಂದಿಗೆ ಶಾಮಿಲಾಗಿ ಮುಖ್ಯಾಧಿಕಾರಿ ಮೀನಾಕ್ಷಿರವರು ಹೊರ ಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣ 1 ಕೋಟಿ 65 ಲಕ್ಷ ರುಪಾಯಿ ಬಿಡುಗಡೆ ಮಾಡಿದ್ದಾರೆ. ಆನಂತರ ಹೊರಗುತ್ತಿಗೆ ಸಿಬ್ಬಂದಿಯಾದ ನೀರುಗಂಟಿ ಶಿವಕುಮಾರ್ ಮೂಲಕ ಸಿಬ್ಬಂದಿಗಳಿಂದ ಕಮಿಷನ್ ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳ ಆದೇಶದನ್ವಯ ಹೊರಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣವನ್ನು ಮುಖ್ಯಾಧಿಕಾರಿಗಳು ಪಾವತಿ ಮಾಡಿದ್ದಾರೆ. ಇದರ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ, ಪುರಸಭೆ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಕಾನೂನು ಬದ್ಧವಾಗಿ ವಿತರಣೆ ಮಾಡದೆ ತರಾತುರಿಯಲ್ಲಿ ನೀಡಿರುವುದಕ್ಕೆ ನಾನು ಸೇರಿದಂತೆ ಸದಸ್ಯರೆಲ್ಲರ ಆಕ್ಷೇಪವಿದೆ ಎಂದರು.

ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಆನಂತರ ಹಣ ಬಿಡುಗಡೆ ಮಾಡೋಣ ಎಂದು ನಾನೇ ಖುದ್ಧಾಗಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಇದ್ಯಾವುದನ್ನು ಲೆಕ್ಕಿಸದೆ ಮುಖ್ಯಾಧಿಕಾರಿಗಳು ತರಾತುರಿಯಲ್ಲಿ ಸಿಬ್ಬಂದಿಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಮುಖ್ಯಾಧಿಕಾರಿಗಳೇ ಎಲ್ಲವನ್ನೂ ಮಾಡಿಕೊಳ್ಳುವುದಾದರೆ ಅಧ್ಯಕ್ಷರಿಗೆ ಗೌರವ ಇಲ್ಲವೇ ಎಂದು ಬಾನುಪ್ರಿಯಾ ಪ್ರಶ್ನಿಸಿದರು.

ಸದಸ್ಯ ಹೆಗ್ಗಡಗೆರೆ ನಾಗರಾಜು ಮಾತನಾಡಿ, ಮುಖ್ಯಾಧಿಕಾರಿ ಮೀನಾಕ್ಷಿರವರು ದ್ವಿತೀಯ ದರ್ಜೆ ಸಹಾಯಕಿ ಸಾವಿತ್ರಮ್ಮ ಅವರಿಗೆ 1 ಕೋಟಿ 65 ಲಕ್ಷ ರುಪಾಯಿ ಬಿಲ್ ಅನ್ನು ಲಾಗಿನ್ ನಿಂದ ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಸಾವಿತ್ರಮ್ಮರವರು ಒಪ್ಪದಿದ್ದಾಗ ಅವರ ಐಡಿಯನ್ನು ದುರುಪಯೋಗ ಪಡಿಸಿಕೊಂಡು ಸಿಬ್ಬಂದಿಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರ ತಿಳಿದ ಸಾವಿತ್ರಮ್ಮ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಯೋಜನಾ ನಿರ್ದೇಶಕರಿಗೆ ಹಣ ಬಿಡುಗಡೆಗೆ ಒತ್ತಡ ಹೇರುತ್ತಿದ್ದಾರೆಂದು ಪತ್ರ ಬರೆದು ರಜೆ ಮೇಲೆ ಹೋಗಿದ್ದಾರೆ. ಇದರ ಬಗ್ಗೆ ಯೋಜನಾ ನಿರ್ದೇಶಕರು ಗಮನ ಹರಿಸದಿರುವುದನ್ನು ನೋಡಿದರೆ ಅವರಿಗೂ ಕಿಕ್ ಬ್ಯಾಕ್ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ದೂರಿದರು.

ಬಿಡದಿಯು ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ದಿನದಿಂದಲೂ 71 ಮಂದಿ ಸಿಬ್ಬಂದಿಗಳಿದ್ದರು. ಈಗ 51 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಲ್ಲಿ 23 ಮಂದಿ

ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ಕನಿಷ್ಠ ವೇತನ ವ್ಯತ್ಯಾಸದ ಹಣ 1 ಕೋಟಿ 65 ಲಕ್ಷ ರುಪಾಯಿ ಬಿಡುಗಡೆ ಆಗಿದೆ.

ಮುಖ್ಯಾಧಿಕಾರಿ ಮತ್ತು ಕೆಲ ಸದಸ್ಯರು, ಸಿಬ್ಬಂದಿ ಶಿವಕುಮಾರ್ ಮೂಲಕ ಒಬ್ಬ ಸಿಬ್ಬಂದಿಯಿಂದ 1 ಲಕ್ಷಕ್ಕೆ 15 ಸಾವಿರ ರುಪಾಯಿನಂತೆ ಒಟ್ಟು 23 ಸಿಬ್ಬಂದಿಗಳಿಗೆ ಬಿಡುಗಡೆಯಾಗಿರುವ 1 ಕೋಟಿ 65 ಲಕ್ಷ ರುಪಾಯಿಗಳಿಗೆ 24 ಲಕ್ಷ 75 ಸಾವಿರ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪ ಮಾಡಿದರು.

ನೀರುಗಂಟಿ ಶಿವಕುಮಾರ್ ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿರುವ ಹಾಗೂ ಸಿ.ಉಮೇಶ್ ಅವರಿಗೆ ಹಣ ನೀಡಬೇಕೆಂದಿರುವ ಆಡಿಯೋ, ಬ್ಯಾಂಕಿನ ಬಳಿ ಸಿಬ್ಬಂದಿಗಳಿಂದ ಹಣ ಪಡೆಯುತ್ತಿರುವ ವಿಡಿಯೋ, ಫೋಟೋಗಳ ದಾಖಲೆಗಳಿವೆ. ಮುಖ್ಯಾಧಿಕಾರಿಗಳು ಕಿಕ್ ಬ್ಯಾಕ್ ಪಡೆಯುವ ಸಲುವಾಗಿ ಕಾನೂನು ಮೀರಿ ಕೆಲಸ ಮಾಡಿದ್ದಾರೆ. ಇದರ ವಿರುದ್ಧ ಲೋಕಾಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಬಿಡದಿ ಪುರಸಭೆಯಲ್ಲಿ ಮೂವರು ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ನಾವುಗಳೇ ಸುಪ್ರೀಂ ಎನ್ನುವಂತೆ ಎಲ್ಲ ವಿಚಾರಗಳಲ್ಲಿಯೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದು, 23 ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಮುಖ್ಯಾಧಿಕಾರಿಗಳು ಅಧ್ಯಕ್ಷರು ಮತ್ತು ಸದಸ್ಯರಿಗೆ ಅಗೌರವ ತೋರುತ್ತಿರುವ ಮುಖ್ಯಾಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ನಾಗರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಲೋಹಿತ್ ಕುಮಾರ್, ಸದಸ್ಯರಾದ ಹರಿಪ್ರಸಾದ್, ಮನು ಲೋಹಿತ್, ಪದ್ಮಾ ಬೆಟ್ಟಸ್ವಾಮಿ, ಎನ್.ಕುಮಾರ್, ರಾಮಚಂದ್ರಯ್ಯ, ಸೋಮಶೇಖರ್, ಲಲಿತಾ ನರಸಿಂಹಯ್ಯ, ನಾಗರಾಜು, ರಮೇಶ್, ರಾಕೇಶ್, ದೇವರಾಜು, ನವೀನ್ ಕುಮಾರ್, ಆಯಿಷಾ ಖಲೀಲ್,‌ ಮಹಿಮಾ, ಬಿಂದ್ಯಾ, ಸರಸ್ವತಮ್ಮ, ಯಲ್ಲಮ್ಮ , ರೇಣುಕಯ್ಯ, ಮುಖಂಡರಾದ ಬೆಟ್ಟಸ್ವಾಮಿ, ಪುಟ್ಟಣ್ಣ, ನರಸಿಂಹಯ್ಯ, ಇಟ್ಟಮಡು ಚನ್ನಪ್ಪ ಮತ್ತಿತರರು ಇದ್ದರು.

ಕೋಟ್ ................

ನೀರುಗಂಟಿ ಶಿವಕುಮಾರ್ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಅನುಮತಿ ಪಡೆಯದೆ ಪುರಸಭೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಲ್ಲದೆ, ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಆರೋಪ ಮಾಡಿ ಘನತೆ ಹಾಳು ಮಾಡಿದ್ದಾನೆ. ಈಗಾಗಲೇ ಅಧ್ಯಕ್ಷರು, ಆತನ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- ಹೆಗ್ಗಡಗೆರೆ ನಾಗರಾಜು, ಸದಸ್ಯರು, ಬಿಡದಿ ಪುರಸಭೆ

ಕೋಟ್ ...................

ಪುರಸಭೆ ಸದಸ್ಯ ಉಮೇಶ್ ಅವರಿಗೆ ಹಣ ಕೊಡಬೇಕೆಂದು ವಾಟರ್ ಮ್ಯಾನ್ ಶಿವಕುಮಾರ್ ನಮ್ಮ ಬಳಿ ಪಡೆದುಕೊಂಡಿದ್ದು ನಿಜ. ನಮಗೆ ನಮ್ಮ ಹಣ ಕೈ ಸೇರುವ ಮೊದಲೇ 7 ಲಕ್ಷ 50 ಸಾವಿರ ರುಪಾಯಿಗೆ 50 ಸಾವಿರ ರುಪಾಯಿ ಲಂಚ ಕೊಟ್ಟಿದ್ದೇನೆ.

- ಪ್ರಕಾಶ್ ಮತ್ತು ಚಿಕ್ಕೈದ, ನೀರುಗಂಟಿಗಳು, ಬಿಡದಿ ಪುರಸಭೆ.

ಕೋಟ್ ...................

ಬಿಡದಿ ಪುರಸಭೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ 1 ಕೋಟಿ 65 ಲಕ್ಷ ರುಪಾಯಿ ಕಾನೂನು ಪ್ರಕಾರ ಪಾವತಿಯಾಗಿಲ್ಲ. ಈ ಬಗ್ಗೆ ಚರ್ಚೆ ನಡೆಸಲು ಪುರಸಭೆಯಲ್ಲಿ ತುರ್ತು ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚಿಸಿ ಮುಖ್ಯಾಧಿಕಾರಿ ಮೀನಾಕ್ಷಿ ಮತ್ತು ಸದಸ್ಯ ಸಿ.ಉಮೇಶ್ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುವ ತೀರ್ಮಾನ ಕೈಗೊಳ್ಳುತ್ತಾರೆ.

- ಬೆಟ್ಟಸ್ವಾಮಿ, ಕಾಂಗ್ರೆಸ್ ಮುಖಂಡರು, ಬಿಡದಿ

19ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ಅಧ್ಯಕ್ಷೆ ಬಾನುಪ್ರಿಯಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.