ಖಾಸಗಿ ಫೈನಾನ್ಸ್‌ ಒಂದರಲ್ಲಿ ಹಣ ಸಂಗ್ರಹಣೆ ಕೆಲಸ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕಿಡಿಗೇಡಿಗಳ ತಂಡವೊಂದು ಅಪಹರಿಸಿ, ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ರೈಲ್ವೆ ಹಳಿಯ ಮೇಲೆ ಶವ ಎಸೆದು ಪರಾರಿಯಾಗಿರುವ ಭೀಕರ ಘಟನೆ ಭಾಲ್ಕಿಯಲ್ಲಿ ನಡೆದಿದೆ. ಮೃತನನ್ನು ಭಾಲ್ಕಿಯ ಮಾಸೂಮ್‌ ಪಾಶಾ ಕಾಲೋನಿ ನಿವಾಸಿ, ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ ಸುದರ್ಶನ ಅಮರೇಶ್ವರ ರಟಿಕಲೆ (21) ಎಂದು ಗುರುತಿಸಲಾಗಿದೆ. ಸುದರ್ಶನ ಕಾಲೇಜು ಮುಗಿದ ನಂತರ ಗಿರೀಶ ಕುಡ್ತೆ ಎಂಬುವವರ ಫೈನಾನ್ಸ್‌ನಲ್ಲಿ ಹಣ ಸಂಗ್ರಹಣೆ ಕೆಲಸ ಮಾಡುತ್ತಿದ್ದ.

ಕನ್ನಡಪ್ರಭ ವಾರ್ತೆ, ಭಾಲ್ಕಿ (ಬೀದರ್‌)

ಘಟನೆಯ ವಿವರ: ಸೆಪ್ಟೆಂಬರ್ 30ರ ಸಂಜೆ ಸುದರ್ಶನ ಭಾಲ್ಕಿಯ ಬಂಗಾರ ಅಂಗಡಿ ಸಾಲಿನಲ್ಲಿ ಫೈನಾನ್ಸ್‌ ಹಣ ಸಂಗ್ರಹಿಸುತ್ತಿದ್ದಾಗ, ಐದು ಜನ ಯುವಕರ ತಂಡ ಆತನನ್ನು ಬೈಕ್‌ ಮೇಲೆ ಬಲವಂತವಾಗಿ ಅಪಹರಿಸಿಕೊಂಡು ಹೋಗಿದೆ. ಈ ವಿಷಯವನ್ನು ಸುದರ್ಶನ ತನ್ನ ಪರಿಚಿತೆಯಾದ ಆರತಿ ಎಂಬಾಕೆಗೆ ಫೋನ್‌ ಮಾಡಿ ತಿಳಿಸಿದ್ದ. ತಕ್ಷಣವೇ ಆರತಿ ಆತನ ತಾಯಿ ಲಕ್ಷ್ಮಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುದರ್ಶನನ ಪೋಷಕರು ಮತ್ತು ಫೈನಾನ್ಸ್‌ ಮಾಲೀಕ ಗಿರೀಶ ಕುಡ್ತೆ ಸೇರಿ ನಗರದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಬಂಗಾರ ಲೈನ್‌ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ರೈಲ್ವೆ ಹಳಿಯಲ್ಲಿ ಶವ ಪತ್ತೆ: ಆರೋಪಿಗಳಾದ ನೀರಜ ಮೋಳಕೇರೆ (ಶಮಶಾಪೂರವಾಡಿ, ಭಾಲ್ಕಿ), ಪಂಚಶೀಲನಗರದ ನಿವಾಸಿಗರಾದ ವಿಶಾಲ ಶರಣಪ್ಪ, ಸಚಿನ್‌ ಸಂಜಯ, ಸಾಯಿ ಶಕ್ತಿವಾನ್‌ ಕಾಂಬ್ಳೆ ಹಾಗೂ ಆದಿತ್ಯ ಸಂಜಯ ಕಾಂಬ್ಳೆ ಎಂಬುವವರು ಸುದರ್ಶನನನ್ನು ಅಪಹರಿಸಿ, ಪಂಚಶೀಲ ನಗರದಲ್ಲಿ ತೀವ್ರವಾಗಿ ಹಲ್ಲೆ ನಡೆಸಿ, ಗಲಾಟೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಖಾನಾಪುರ-ಹಲಬರ್ಗಾ ರೈಲ್ವೆ ನಿಲ್ದಾಣಗಳ ಮಧ್ಯದ ಕರಡ್ಯಾಳ ಗುರುಕುಲ ಕಾಲೇಜಿನ ಸಮೀಪದ ರೈಲ್ವೆ ಹಳಿಯ ಮೇಲೆ ಮೃತದೇಹವನ್ನು ಎಸೆದು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.ಪ್ರಕರಣ ದಾಖಲು: ಮೃತನ ತಾಯಿ ಲಕ್ಷ್ಮಿ ಅಮರೇಶ್ವರ ರಟಿಕಲೆ ನೀಡಿದ ದೂರಿನನ್ವಯ ಬೀದರ್‌ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು (ಅಪರಾಧ ಸಂಖ್ಯೆ: 13/2026), ಪೊಲೀಸರು ತನಿಖೆ ಕೈಗೊಂಡು ಆರೋಪಿಗ‍ಳನ್ನು ಬಂಧಿಸಿದ್ದಾರೆ.

ಆರತಿ ಎಂಬ ಯುವತಿ ಆತ್ಮಹತ್ಯೆ: ಸುದರ್ಶನ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಭಾಲ್ಕಿ ನಿವಾಸಿ ಆರತಿ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಬ್ಬರ ಮಧ್ಯೆ ಪ್ರೇಮಾಂಕುರವಿತ್ತು ಇದಕ್ಕೆ ಆರೋಪಿಗಳ ಪೈಕಿ ಒಬ್ಬನು ಆರತಿಯನ್ನು ಪ್ರೀತಿಸುತ್ತಿದ್ದ ಹೀಗಾಗಿ ಸುದರ್ಶನನನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭಾಲ್ಕಿ ಪೊಲೀಸರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.