ಕನ್ನಡಪ್ರಭ ವಾರ್ತೆ ಬೆಂಗಳೂರು

ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಸಿನಿಮಿಯ ರೀತಿ ಅಪಹರಣ ಮಾಡಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಹಾಗೂ ತಿರುಪಾಳ್ಯದಲ್ಲಿ ವಾಸವಿದ್ದ ಅಶೀತ್ ಜ್ಹಾ(28) ಅಪಹರಣಕ್ಕೊಳಗಾದವರು. ಅಶೀತ್ ಜ್ಹಾ ಅವರು ಪಾಲುದಾರಿಕೆಯಲ್ಲಿ ಬೇಗೂರಿನ ಅಕ್ಷಯನಗರದಲ್ಲಿ ಸ್ಪಾವೊಂದನ್ನು ನಡೆಸುತ್ತಿದ್ದರು. ವ್ಯವಹಾರದ ವಿಷಯವಾಗಿ ವೈಮನಸ್ಸು ಉಂಟಾಗಿ ಮತ್ತೊಬ್ಬ ಪಾಲುದಾರ ತನ್ನ ಸಹಚರರ ಜತೆ ಸೇರಿ ಅಪಹರಿಸಿದ್ದಾನೆ ಎನ್ನಲಾಗಿದೆ.

ಸ್ಪಾದಿಂದ ಅಶೀತ್ ಮನೆಗೆ ಮ್ಯಾನೇಜರ್‌ ಮನುಕುಮಾರ್‌ ಜತೆ ಬೈಕ್‌ನಲ್ಲಿ ಹೋಗುವಾಗ ಬೆಟ್ಟದಾಸನಪುರ ಸಮೀಪ ಭಾನುವಾರ ರಾತ್ರಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಬೈಕ್‌ಗೆ ಕಾರಿನಿಂದ ಡಿಕ್ಕಿಯೊಡೆದಿದ್ದಾರೆ. ಬೈಕ್‌ನಿಂದ ಕೆಳಗೆ ಬೀಳುತ್ತಿದ್ದಂತೆ ಲಾಗ್‌ನಿಂದ ಕಾಲಿಗೆ ಹಲ್ಲೆ ನಡೆಸಿ ಅಶೀತ್‌ನನ್ನು ಅಪಹರಿಸಿದ್ದಾರೆ. ಈ ವೇಳೆ ಮ್ಯಾನೇಜರ್‌ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಗಾಯಗೊಂಡಿರುವ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.