ಸಾರಾಂಶ
ಧಾರವಾಡ: ಹೆತ್ತ ಮಕ್ಕಳನ್ನೇ ಪ್ರಿಯಕರರೊಂದಿಗೆ ಸೇರಿಕೊಂಡು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ತಾಯಂದಿರು ಸೇರಿದಂತೆ ಅವರ ಇಬ್ಬರು ಪ್ರಿಯಕರರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಜನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಧಾರವಾಡದ ರೇಷ್ಮಾ ಸಾಂಬ್ರಾಣಿ, ಪ್ರಿಯಾಂಕ ಸಾಂಬ್ರಾಣಿ, ಭೂಸಪ್ಪ ಚೌಕ ನಿವಾಸಿ ಸುನೀಲ ಕರಿಗಾರ ಮತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಮುತ್ತುರಾಜ ಬಿ. ಎಂಬುವವರೇ ಬಂಧಿತರು.
ರೇಷ್ಮಾ ಮತ್ತು ಪ್ರಿಯಾಂಕ ಇಬ್ಬರು ಅಣ್ಣ-ತಮ್ಮಂದಿರರ ಹೆಂಡ್ತಿಯರು. ಈ ಇಬ್ಬರಿಗೂ ತಲಾ ಮೂವರು ಮಕ್ಕಳು. ಇದರಲ್ಲಿ ಒಬ್ಬಳ ಪತಿ ತೀರಿಕೊಂಡಿದ್ದಾನೆ.
ಈ ಇಬ್ಬರಿಗೂ ಪ್ರಿಯಕರರಿದ್ದರು. ಆ ಪ್ರಿಯಕರರೊಂದಿಗೆ ತಮ್ಮ ಆರು ಮಕ್ಕಳನ್ನು ನ. 7ರಂದು ಕಿಡ್ನಾಪ್ ಮಾಡುತ್ತಾರೆ. ಈ ವೇಳೆ ಇವರ ಕುಟುಂಬಸ್ಥರು ಆರು ಜನ ಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರು ಕೊಡುತ್ತಾರೆ.
ಆರು ಜನ ಮಕ್ಕಳನ್ನು ಕಿಡ್ನಾಪ್ ಮಾಡಿಕೊಂಡು ಬೆಂಗಳೂರು ಹೆಬ್ಬಾಳಕ್ಕೆ ತೆರಳಿರುತ್ತಾರೆ. ಮಕ್ಕಳು ಕಿಡ್ನಾಪ್ ಎಂಬ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯವೂ ಮೂರು ಪ್ರತ್ಯೇಕ ತಂಡಗಳನ್ನು ಮಾಡಿ ತನಿಖೆ ಶುರು ಮಾಡುತ್ತದೆ. ಕಳೆದ ಎರಡು ದಿನದ ಹಿಂದೆ ಈ ಮಹಿಳೆಯರಿಬ್ಬರು ತಮ್ಮ ಗಂಡನ ಮನೆಗೆ ಕರೆ ಮಾಡಿ ನಿಮ್ಮ ಮಕ್ಕಳು ಬೇಕೆಂದರೆ ಇಂಥ ಅಕೌಂಟ್‌ಗೆ ₹ 10 ಲಕ್ಷ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಇಲ್ಲೇ ಎಲ್ಲಿಯಾದರೂ ಬಿಟ್ಟು ನಾವು ಹೋಗುವುದಾಗಿ ಬೆದರಿಸಿದ್ದಾರೆ.
ಆಗ ಕುಟುಂಬಸ್ಥರು, ಆ ಮಕ್ಕಳ ತಾಯಿಂದಿರು ಹಾಗೂ ಅವರ ಪ್ರಿಯಕರರ ವಿರುದ್ಧ ಮತ್ತೊಂದು ದೂರು ಕೊಡುತ್ತಾರೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಬೆಂಗಳೂರಲ್ಲಿದ್ದ ಈ ಮಹಿಳೆಯರು ಹಾಗೂ ಅವರ ಪ್ರಿಯಕರರೊಂದಿಗೆ ಬಂಧಿಸುತ್ತಾರೆ. ಆರು ಮಕ್ಕಳನ್ನು ರಕ್ಷಿಸಿದ್ದಾರೆ. ಈ ಮಹಿಳೆಯರು ಹಾಗೂ ಅವರ ಪ್ರಿಯಕರರು ನೇಪಾಳ ಸೇರಿದಂತೆ ಬೇರೆಡೆ ತೆರಳಿ ನೆಲೆಸಬೇಕೆಂದು ಯೋಚಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಾಯಿಂದಿರರೇ ಮಕ್ಕಳನ್ನು ಪ್ರಿಯಕರರೊಂದಿಗೆ ಸೇರಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಪೊಲೀಸರು ಹಾಗೂ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಿಪಿಐ ಸಂಗಮೇಶ ದಿಡಿಗಿನಾಳ ನೇತೃತ್ವದ ತಂಡವೂ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದೆ.