ಬಾಲಕಿಗೆ ಕಿಡ್ನಿ ವೈಫಲ್ಯ: ಧರ್ಮಭೇದ ಮರೆತು ಒಗ್ಗೂಡಿದ ಗ್ರಾಮ

| Published : Feb 29 2024, 02:05 AM IST

ಸಾರಾಂಶ

ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್-ಲಕ್ಷ್ಮೀ ದಂಪತಿಯ 13 ವಯಸ್ಸಿನ ಕಿರಿಯ ಪುತ್ರಿ ಯಮುನ ಕಳೆದ ಐದು ತಿಂಗಳಿಂದ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಇದೀಗ ಯಮುನಾಳ ಚಿಕಿತ್ಸೆಗೆ ಅಪಾರ ಆರ್ಥಿಕ ನೆರವು ಬೇಕಾಗಿದೆ. ಇದಕ್ಕೆ ಗ್ರಾಮಸ್ಥರು ಜಾಲತಾಣ ಮೂಲಕ ಒಂದಾಗಿದ್ದಾರೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ‘ನನಗೆ ಅಪ್ಪ-ಅಮ್ಮನ ಜೊತೆ ಇರಬೇಕು... ಪ್ಲೀಸ್ ಹೆಲ್ಪ್‌ ಮಾಡಿ... ನನ್ನ ಮಗುವನ್ನು ಕಾಪಾಡಿ ಕೊಡಿ... ನನಗೆ ಅಣ್ಣ-ತಮ್ಮ ಯಾರೂ ಇಲ್ಲ... ಇರುವುದು ಒಬ್ಬಳೇ ತಂಗಿ... ಪ್ಲೀಸ್ ನಮಗೆ ಸಹಾಯ ಮಾಡಿ...!’ಇದು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ಕಡು ಬಡತನದ ಕುಟುಂಬವೊಂದರ ಕಣ್ಣೀರ ಕೋರಿಕೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್-ಲಕ್ಷ್ಮೀ ದಂಪತಿಯ 13 ವಯಸ್ಸಿನ ಕಿರಿಯ ಪುತ್ರಿ ಯಮುನ ಕಳೆದ ಐದು ತಿಂಗಳಿಂದ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಇದೀಗ ಯಮುನಾಳ ಚಿಕಿತ್ಸೆಗೆ ಅಪಾರ ಆರ್ಥಿಕ ನೆರವು ಬೇಕಾಗಿದೆ. ಮೈಸೂರಿನ ಆಸ್ಪತ್ರೆಯೊಂದರಲ್ಲಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದೆ. ಇದೀಗ ಯಮುನಾಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಊಟ ತಿನ್ನಲು ಕೂಡ ಕಷ್ಟದ ಪರಿಸ್ಥಿತಿ, ಹೆಚ್ಚು ನೀರು ಕುಡಿದರೂ ಆಪತ್ತು. ಆದ್ದರಿಂದ ಆದಷ್ಟು ಕೂಡಲೇ ಕಿಡ್ನಿ ಮರು ಜೋಡಣೆ ಮಾಡಬೇಕಿರುವುದು ಅನಿವಾರ್ಯವಾಗಿದೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈಗ ಸಹಾಯಕ್ಕೆ ಎದುರು ನೋಡುತ್ತಿದೆ. ಯಮುನಾಳ ಕಿಡ್ನಿ ಮರು ಜೋಡಣೆಗಾಗಿ ಸುಮಾರು ರು.10 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಬಾಲಕಿಯ ಚಿಕಿತ್ಸೆಗೆ ಕೊಡಗರಹಳ್ಳಿ ಗ್ರಾಮಸ್ಥರು ಒಗ್ಗೂಡಿದ್ದಾರೆ. ಸಾಮಾಜಿಕ ಜಾಲತಾಣ:

ಯಮುನಾಳ ಕಿಡ್ನಿ ಮರು ಜೋಡಣೆ ಚಿಕಿತ್ಸೆಗೆ ರು.10 ಲಕ್ಷ ಹಣ ಬೇಕಾಗಿರುವುದರಿಂದ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹಲವಾರು ಮಂದಿ ದಾನಿಗಳು ಹಣವನ್ನು ಕಳುಹಿಸುವ ಮೂಲಕ ಪುಟ್ಟ ಕಂದಮ್ಮಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಈಗಾಗಲೇ ಮಗುವಿನ ಚಿಕಿತ್ಸೆಗೆ ಒಂದು ಲಕ್ಷ ರು.ಗೂ ಅಧಿಕ ಹಣ ಖಾತೆಗೆ ಜಮೆ ಆಗಿದೆ. ಆದ್ದರಿಂದ ಇನ್ನಷ್ಟು ಹಣ ಬೇಕಿರುವುದರಿಂದ ಊರಿನವರು ಎಲ್ಲರೂ ಒಗ್ಗೂಡಿ ಹಣ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. --------------------ಜಾತಿ, ಧರ್ಮ ಮರೆತು ಒಂದಾದರು!ಯಮುನಾಳ ಚಿಕಿತ್ಸೆಗೆ ನೆರವಾಗಲು ಕೊಡಗರಹಳ್ಳಿ ಗ್ರಾಮದವರು ಜಾತಿ, ಧರ್ಮ ಮರೆತು ಎಲ್ಲರೂ ಒಂದಾಗಿದ್ದಾರೆ. ಮಸೀದಿಯ ಗುರುಗಳು, ದೇವಾಲಯ ಸಮಿತಿಯವರು, ಚರ್ಚ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಚಿಕಿತ್ಸೆಗೆ ನೆರವು ಜೋಡಿಸಲು ಒಟ್ಟು ಸೇರಿದ್ದಾರೆ. --------------ಕಿಡ್ನಿ ನೀಡಲು ಮುಂದಾಗಿರುವ ಅಜ್ಜಿ!ಯಮುನಾಳ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಆದಷ್ಟು ಬೇಗ ಕಿಡ್ನಿ ಮರು ಜೋಡಿಸಬೇಕಿದೆ. ಆದ್ದರಿಂದ ಅಜ್ಜಿ ಚೆನ್ನಬಸವಿ ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿದ್ದಾರೆ. ನನ್ನ ಬಳಿ ಯಾವುದೇ ಹಣ ಇಲ್ಲ. ಆದರೆ ನನ್ನ ಕಿಡ್ನಿಯನ್ನು ನೀಡುತ್ತೇನೆ ಎಂದು ಗ್ರಾ.ಪಂ. ಸದಸ್ಯೆಯಾಗಿರುವ ಅಜ್ಜಿ ಚೆನ್ನಬಸವಿ ಹೇಳುತ್ತಾರೆ. ------------ಕಳೆದ 5 ತಿಂಗಳಿಂದ ಮಗಳಿಗೆ ಕಿಡ್ನಿ ಸಮಸ್ಯೆಯಿದೆ. ಆಕೆ ಊಟ ಕೂಡ ಮಾಡಲಾಗುತ್ತಿಲ್ಲ. ಇದೀಗ ಕಿಡ್ನಿಯನ್ನು ಆದಷ್ಟು ಬೇಗ ಮರು ಜೋಡಣೆ ಮಾಡಬೇಕಿದೆ. ಇದಕ್ಕೆ ರು.10 ಲಕ್ಷ ಹಣ ಬೇಕಾಗಿದೆ. ನಮ್ಮ ಊರಿನ ಗ್ರಾಮಸ್ಥರು ಸೇರಿದಂತೆ ಹಲವು ಸಹಕಾರ ನೀಡುತ್ತಿದ್ದಾರೆ. ಈ ವರೆಗೆ ಒಂದು ಲಕ್ಷ ರು. ಹಣ ಚಿಕಿತ್ಸೆಗೆ ಬಂದಿದೆ. -ಮಂಜುನಾಥ್, ಯಮುನಾಳ ತಂದೆ, ಕೊಡಗರಹಳ್ಳಿ.