ದೇಶದ ಗ್ರಾಮೀಣ ಭಾಗದ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೇರೆ ಬೇರೆ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಿಡ್ನಿ ಕಸಿ ಮಾಡುವ ಮೂಲಕ ಗದಗ ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಎಸ್.ಆರ್. ನಾಗನೂರ ಹೇಳಿದರು.

ಗದಗ: ದೇಶದ ಗ್ರಾಮೀಣ ಭಾಗದ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೇರೆ ಬೇರೆ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಿಡ್ನಿ ಕಸಿ ಮಾಡುವ ಮೂಲಕ ಗದಗ ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಆಸ್ಪತ್ರೆಯ ಮುಖ್ಯಸ್ಥ ಡಾ. ಎಸ್.ಆರ್. ನಾಗನೂರ, ​ಗ್ರಾಮೀಣ ಭಾಗದ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಕಸಿ ಟ್ರ್ಯಾನ್ಸ್‌ಪ್ಲಾಂಟ್ ಸಾಕಾರಗೊಂಡಿರುವುದು ದೇಶದಲ್ಲೇ ಮೊದಲು. ಈ ಅಪರೂಪದ ಸಾಧನೆಯು ಇಂಗ್ಲೆಂಡ್‌ನ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗದಗ ಜಿಲ್ಲೆ ಹಾಗೂ ಹುಲಕೋಟಿಯ ಹೆಸರು ದಾಖಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೇವಲ ದೊಡ್ಡ ದೊಡ್ಡ ನಗರಗಳಲ್ಲಿರುವ ಆಸ್ಪತ್ರೆಗಳಲ್ಲಿ ಮಾತ್ರ ಸಾಧ್ಯವಿದ್ದ ಕಿಡ್ನಿ ಕಸಿ ಚಿಕಿತ್ಸೆಯನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸಬೇಕು ಎನ್ನುವ ಹಠದಿಂದ ಹುಲಕೋಟಿಯ ಯುವ ವೈದ್ಯರ ತಂಡ ಈ ಸಾಹಸಕ್ಕೆ ಕೈಹಾಕಿತು. ನಮ್ಮಲ್ಲಿನ ಅತ್ಯಾಧುನಿಕ ಮಾನವ ಸಂಪನ್ಮೂಲ ಮತ್ತು ಯುವ ವೈದ್ಯರ ಶ್ರಮದಿಂದ ಇದು ಸಾಧ್ಯವಾಗಿದೆ. ಈ ​ಆಸ್ಪತ್ರೆಯಲ್ಲಿ ಇದುವರೆಗೂ ಒಟ್ಟು 11 ಕಿಡ್ನಿ ಕಸಿ ಚಿಕಿತ್ಸೆಗಳನ್ನು ಮಾಡಲಾಗಿದೆ. ​ಇದರಲ್ಲಿ 9 ಪ್ರಕರಣಗಳು ಸಂಬಂಧಿಕರಿಂದ ಕಿಡ್ನಿ ಪಡೆದವುಗಳಾಗಿವೆ. ಇನ್ನುಳಿದ ​2 ಪ್ರಕರಣಗಳಲ್ಲಿ ಬ್ರೇನ್ ಡೆಡ್ ಆದ ವ್ಯಕ್ತಿಗಳಿಂದ ಕಿಡ್ನಿ ಪಡೆದು ಕಸಿ ಮಾಡಲಾಗಿದೆ. ​ಬ್ರೇನ್ ಡೆಡ್ ಆದವರ ಕಿಡ್ನಿಯನ್ನು ಗ್ರೀನ್ ಕಾರಿಡಾರ್ ಮೂಲಕ ಹುಬ್ಬಳ್ಳಿಗೆ ಸಾಗಿಸಲಾಗಿದ್ದು, ಹಳ್ಳಿಯಿಂದ ನಗರಕ್ಕೆ ಅಂಗಾಗ ರವಾನಿಸಿ ಇತಿಹಾಸ ನಿರ್ಮಿಸಲಾಗಿದೆ ಎಂದರು.

ಕಿಡ್ನಿ ಕಸಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ​ತಜ್ಞ ವೈದ್ಯರಾದ ಡಾ. ಅವಿನಾಶ ಓದುಗೌಡ್ರ ಮಾತನಾಡಿ, 29 ವರ್ಷದ ಬಳ್ಳಾರಿ ಮೂಲದ ಯುವತಿಯೊಬ್ಬರ ಕಿಡ್ನಿ ವೈಫಲ್ಯವಾಗಿ, ಹುಲಕೋಟಿಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇಲ್ಲಿಗೆ ಆಗಮಿಸಿದರು. ಆ ಯುವತಿಗೆ ಅವರ ತಂದೆಯೇ ಕಿಡ್ನಿ ನೀಡಲು ಮುಂದಾದರು. ಆದರೆ ದುರದೃಷ್ಟ ಎಂದರೆ ಅವರ ತಂದೆಯ ಕಿಡ್ನಿಯಲ್ಲಿಯೇ ತೊಂದರೆ ಇತ್ತು. ಆನಂತರ ತಾಯಿಯು ಕಿಡ್ನಿ ನೀಡಲು ಮುಂದೆ ಬಂದಾಗ, ಅವರ ರಕ್ತದ ಗುಂಪು, ಯುವತಿಯ ಗುಂಪು ಬೇರೆಯಾಗಿದ್ದ ಹಿನ್ನೆಲೆಯಲ್ಲಿ ತೀವ್ರ ತೊಂದರೆಯಾಯಿತು. ಇದನ್ನೊಂದು ಸವಾಲಾಗಿ ಸ್ವೀಕರಿಸಿದ ನಮ್ಮ ತಂಡ, ಬೇರೆ ಬೇರೆ ಬ್ಲಡ್ ಗ್ರೂಪ್ ಇದ್ದರೂ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದೆ. ಇದಕ್ಕೆ ಬೆಂಗಳೂರು ಸೇರಿದಂತೆ ಹಲವಾರು ಹಿರಿಯ ನುರಿತ ವೈದ್ಯರು ಕೂಡಾ ಸಕಾಲಕ್ಕೆ ಮಾರ್ಗದರ್ಶನ ಮಾಡಿದರು ಎಂದ ಹೇಳಿದರು.

ಹುಲಕೋಟಿಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಯಿಂದಾಗಿ ಕಿಡ್ನಿ ದಾನ ಮಾಡಿದವರನ್ನು 3 ದಿನಕ್ಕೆ ಹಾಗೂ ಕಿಡ್ನಿ ಪಡೆದವರನ್ನು ಕೇವಲ 5 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಇದು ಕೂಡಾ ಗ್ರಾಮೀಣ ಭಾಗದಲ್ಲಿನ ವೈದ್ಯಕೀಯ ಸೌಲಭ್ಯದ ಬೆಳವಣಿಗೆಯಲ್ಲಿ ಮಹತ್ವದ ಸಾಧನೆಯಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮತ್ತು ಡಿ.ಆರ್. ಪಾಟೀಲ ಅವರ ಪ್ರಯತ್ನವೇ ಕಾರಣವಾಗಿದೆ ಎಂದರು.

​ಸುದ್ದಿಗೋಷ್ಠಿಯಲ್ಲಿ ಸಾಧಕ ವೈದ್ಯರ ತಂಡದ ಡಾ. ದೀಪಕ ಕುರಹಟ್ಟಿ, ಡಾ. ವೇಮನ ಸಾಹುಕಾರ, ಡಾ. ನಿಯಾಜ್ ಅಹ್ಮದ, ಡಾ. ಪ್ಯಾರಾಲಿ ನೂರಾನಿ, ಡಾ. ಪವನ ಕೋಳಿವಾಡ, ಡಾ. ವಿಶಾಲ, ಡಾ. ವಂದನಾ ಉಪಸ್ಥಿತರಿದ್ದರು.