ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಮನೆಯ ಮೇಲಿದ್ದ ಹೈವೋಲ್ಟೇಜ್ ವಿದ್ಯುತ್ ತಂತಿ ಒಮ್ಮೆಲೆ ತುಂಡಾಗಿ ಪತ್ರಾಸ್ (ತಗಡಿ ಶೆಡ್) ಮೇಲೆ ಬಿದ್ದ ಪರಿಣಾಮ, ಇನ್ನೇನು ಎರಡ್ಮೂರು ದಿನದಲ್ಲಿ ಮದುವೆಯಾಗಬೇಕಿದ್ದ 23 ವರ್ಷದ ಯುವಕ ಸೇರಿದಂತೆ ಇಬ್ಬರು ಅಸುನೀಗಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ದಾಸರಮಡ್ಡಿ ಗಲ್ಲಿಯಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ನಾಲ್ಕೈದು ಜನರು ಕೂಡ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ದಾಸರಮಡ್ಡಿಯ ಸಂತೋಷ ರಾಮಪ್ಪ ಸುಣಗಾರ (೨೩) ಹಾಗೂ ಬೆಳಗಾವಿ ಜಿಲ್ಲೆಯ ಬೆನ್ನಾಳದ ಶೋಭಾ ಹುಲ್ಲೆನ್ನವರ(೪೦) ಮೃತಪಟ್ಟವರು. ದಾಸರಮಡ್ಡಿಯಲ್ಲಿ ಮಂಗಳವಾರ ಮತ್ತು ಬುಧವಾರ ದುರ್ಗಾದೇವಿ ಜಾತ್ರೆ ಇತ್ತು. ಈ ವೇಳೆ ಸುಣಗಾರ ಎಂಬುವವರ ಮನೆ ಮೇಲಿದ್ದ ಹೈವೋಲ್ಟೇಜ್ ತಂತಿ ಇದ್ದಕ್ಕಿದ್ದಂತೆ ತುಂಡಾಗಿ ತಗಡಿನ ಶೆಡ್ ಮೇಲೆ ಬಿದ್ದಿದೆ. ಇದೆ ವೇಳೆ ದೇವಿಯ ಪಲ್ಲಕ್ಕಿ ಉತ್ಸವ ನೋಡಲು ನೆಂಟರೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಹತ್ತಾರು ಜನರಿಗೆ ವಿದ್ಯುತ್ ಸ್ಪರ್ಶವಾಗಿದೆ. ಆಗ ಕೂಡಲೇ ಎಚ್ಚೆತ್ತುಕೊಂಡ ಸಂತೋಷ ಸುಣಗಾರ ನಾಲ್ಕೈದು ಜನರನ್ನು ಎಳೆದು, ದೂಡಿ ಕಾಪಾಡಿದ್ದಾನೆ. ನಂತರ ಆತನ ಕಾಲು ಹೈವೋಲ್ಟೇಜ್ ತಂತಿಗೆ ತಾಕಿದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾನೆ. ಅದರಂತೆ ಆತ ವಿವಾಹವಾಗಬೇಕಿದ್ದ ಆತನ ಬಾವಿಪತ್ನಿಯ ತಾಯಿ ಶೋಭಾ ಕೂಡ ಅಸುನೀಗಿದ್ದಾರೆ.
ಏನಿದು ಘಟನೆ?:ಪ್ರತಿವರ್ಷದಂತೆ ದಾಸರಮಡ್ಡಿಯಲ್ಲಿ ಜಾತ್ರೆ ನಡೆಯುತ್ತದೆ. ಅದರಂತೆ ಮಂಗಳವಾರ ದುರ್ಗಾದೇವಿ ಜಾತ್ರೆಯ ಸಂಭ್ರಮ ಪ್ರಾರಂಭವಾಗಿತ್ತು. ದಾಸರಮಡ್ಡಿಯಲ್ಲಿನ ಜನರು ತಮ್ಮ ತಮ್ಮ ಸಂಬಂಧಿಗಳನ್ನೆಲ್ಲ ಜಾತ್ರೆಗೆಂದು ಕರೆಸಿಕೊಂಡಿದ್ದರು. ಅದರಂತೆ ಮಂಗಳವಾರ ಮಧ್ಯಾಹ್ನ ದೇವಿಯ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿದೆ. ಆಗ ಮಡ್ಡಿಯ ಪಶ್ಚಿಮ ದಿಕ್ಕಿನಲ್ಲಿರುವ ಸುಣಗಾರ ಅವರ ಮನೆ ಮೇಲ್ಭಾಗದಲ್ಲಿ ಹಾದು ಹೋದ ಹೈವೋಲ್ಟೇಜ್ ವಿದ್ಯುತ್ ತಂತಿ ಒಮ್ಮೇಲೆ ತುಂಡಾಗಿ ಬಿದ್ದಿದೆ. ಅದು ಪತ್ರಾಸ್ ಶೆಡ್ ಮೇಲೂ ಬಿದ್ದಿದೆ. ಆಗ ನೆಂಟರೊಂದಿಗೆ ದೇವಸ್ಥಾನಕ್ಕೆ ತೆರಳುತಿರುವ ೮-೧೦ ಜನರಿಗೆ ವಿದ್ಯುತ್ ಆಘಾತವಾಗಿದೆ. ಅಷ್ಟರಲ್ಲಿ ಮೃತನಾದ ಸಂತೋಷ ಸುಣಗಾರ ಧೈರ್ಯ ಮಾಡಿ ಬಹುತೇಕರನ್ನು ಎಳೆದು ದೂರಕ್ಕೆ ಸಾಗಿಸಿ, ಅನೇಕರನ್ನು ಪಾರು ಮಾಡಿದ್ದಾನೆ. ಆದರೆ ಕೊನೆಯಲ್ಲಿ ಅವನ ಕಾಲಿಗೆ ತಂತಿ ತಾಗಿ ತಾನೇ ಬಲಿಯಾಗಿದ್ದಾನೆ. ಮಾತ್ರವಲ್ಲ, ಬೆಳಗಾವಿ ಜಿಲ್ಲೆ ಬೆನ್ನಾಳ ಗ್ರಾಮದಿಂದ ಜಾತ್ರೆಗೆಂದು ಬಂದಿದ್ದ ಸಂತೋಷನ ಅತ್ತೆ (ಭಾವಿಪತ್ನಿ ತಾಯಿ) ಶೋಭಾಳಿಗೂ ಹೈವೋಲ್ಟೇಜ್ ವಿದ್ಯುತ್ ತಂತಿ ತಾಗಿ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೂ.28ಕ್ಕೆ ಇತ್ತು ಸಂತೋಷ ವಿವಾಹ:ಮೃತ ಸಂತೋಷ ಸುಣಗಾರನ ವಿವಾಹ ಜೂ.28ರಂದು ನಿಶ್ಚಯವಾಗಿತ್ತು. ಬೆಳಗಾವಿ ಜಿಲ್ಲೆಯ ಬೆನ್ನಾಳದ ಹುಡುಗಿಯೊಂದಿಗೆ ಆತ ಹಸೆಮಣೆ ಏರಬೇಕಿತ್ತು. ಹೀಗಾಗಿ ತನಗೆ ಅತ್ತೆಯಾಗಬೇಕಿದ್ದ ಶೋಭಾಳನ್ನು ಜಾತ್ರೆಗೆ ಕರೆಸಿದ್ದ. ಆದರೆ ವಿಧಿಯಾಟ ಬೇರೆಯಾಗಿತ್ತು. ಅತ್ತೆ ಮತ್ತು ಅಳಿಯ ಇಬ್ಬರೂ ಅಸುನೀಗಿದರು. ಈ ದುರ್ಘಟನೆಯಿಂದಾಗಿ ಜಾತ್ರೆ, ವಿವಾಹದ ಸಂಭ್ರಮ ಮಾಯವಾಗಿ ಸೂತಕದ ದಟ್ಟ ಛಾಯೆ ಆವರಿಸಿತ್ತು. ಗಲ್ಲಿ ನಿವಾಸಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಭೇಟಿ:ಘಟನೆ ಸಂಭವಿಸಿದ ಕೂಡಲೇ ವಿಷಯ ತಿಳಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಕೂಡಲೇ ಸ್ಥಳಕ್ಕೆ ಆಗಮಿಸಿದರು. ನಂತರ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡವರನ್ನು ಭೇಟಿ ಮಾಡಿ, ಅವಘಡ ಸಂಭವಿಸಿದ ಸ್ಥಳಕ್ಕೆ ತೆರಳಿ ವೀಕ್ಷಿಸಿ ಸಾರ್ವಜನಿಕರೊಂದಿಗೆ ಸಮಾಲೋಚಿಸಿದರು. ಈ ವೇಳೆ ಮುಖಂಡರಾದ ಶೆಟ್ಟೆಪ್ಪ ಸುಣಗಾರ ಮಾತನಾಡಿ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕೂಲಿ ಮಾಡಿ ಬದುಕುತ್ತಿದ್ದವರ ಜೀವನವನ್ನು ಆಪೋಶನ ತೆಗೆದುಕೊಂಡಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಎಲ್ಲ ವಿಷಯ ಆಲಿಸಿದ ಸಚಿವರು ಈ ಅವಘಡ ಸಂಭವಿಸಬಾರದಿತ್ತು. ತಪ್ಪಿತಸ್ಥ ನೌಕರ ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ. ಮೃತರ ಸಂಬಂಧಿಗಳಿಗೆ ಸರ್ಕಾರದಿಂದ ತಲಾ ₹೫ ಲಕ್ಷ ಪರಿಹಾರ ಕೊಡಲಾಗುತ್ತದೆ. ಅದರಂತೆ ಆಸ್ಪತ್ರೆಯಲ್ಲಿದ್ದವರ ಎಲ್ಲ ಖರ್ಚನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ತಾವೆಲ್ಲರೂ ಈ ದುಃಖದ ಸನ್ನಿವೇಶದಲ್ಲಿ ಶಾಂತರೀತಿಯಿಂದ ಪರಿಸ್ಥಿಯನ್ನು ಎದುರಿಸಬೇಕೆಂದು ಧೈರ್ಯ ತುಂಬಿದರು.ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾ ಪೊಲೀಸ್ ಆಧೀಕ್ಷಕ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್‌ಪಿ ಪ್ರಸನ್ನಕುಮಾರ ದೇಸಾಯಿ, ಜಮಖಂಡಿ ಡಿಎಸ್‌ಪಿ ಶಾಂತವೀರ, ಮುಖಂಡರಾದ ಸಿದ್ದು ಕೊಣ್ಣೂರ, ಪ್ರವೀಣ ನಾಡಗೌಡ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ತೇರದಾಳ ತಹಶೀಲ್ದಾರ ವಿಜಯಕುಮಾರ ಕಡಕೋಳ ಸೇರಿದಂತೆ ಅಧಿಕಾರಿಗಳು ಮುಖಂಡರು ಇದ್ದರು.
ಹೆಸ್ಕಾಂ ನಿರ್ಲಕ್ಷವೇ ಕಾರಣ:ದಾಸರ ಮಡ್ಡಿಯ ಜನರ ವಾಸದ ಮನೆಗಳ ಮೆಲೆಯೇ ಹೈವೋಲ್ಟೇಜ ವಿದ್ಯುತ್ತ ತಂತಿ ಹಾಯ್ದು ಹೋಗಿದೆ. ಅದನ್ನು ಕೂಡಲೆ ಬದಲಾಯಿಸಿರಿ ಎಂದು ಗಲ್ಲಿಯ ಮುಖಂಡರು ನಿವಾಸಿಗಳು ಪಟ್ಟಣದ ಹೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ವಿನಂತಿಸಿದರು ಸಹ ಪ್ರಯೋಜನವಾಗಿಲ್ಲ. ಅಲ್ಲದೆ ೫-೬ತಿಂಗಳುಗಳ ಹಿಂದೆ ಒಂದು ಬಾರಿ ಹೀಗೇ ಅದೇ ತಂತಿ ಹರಿದು ಬಿದ್ದಿತ್ತು ಎನ್ನಲಾಗುತ್ತಿದೆ. ಆಗಲೂ ತಿಳಿಸಿದರೆ ಅಧಿಕಾರಿಗಳು ಜೋಡಿಸಿ ಸರಿಪಡಿಸಿದರೆ ಹೊರತು ಅದನ್ನು ಬದಲಿಸುವ ಗೋಜಿಗೇ ಹೋಗಲಿಲ್ಲ. ಅದಕ್ಕಾಗಿ ಆ ಭಾಗದ ಲೈನ್‌ಮನ್ ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ದಾಸರ ಮಡ್ಡಿ ನಿವಾಸಿಗಳು, ಮುಖಂಡರು ಆರೋಪಿಸಿದರು.------------------
ಕೋಟ್....ತಪ್ಪಿತಸ್ಥ ನೌಕರ ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ. ಮೃತರ ಸಂಬಂಧಿಗಳಿಗೆ ಸರ್ಕಾರದಿಂದ ತಲಾ ₹೫ ಲಕ್ಷ ಪರಿಹಾರ ಕೊಡಲಾಗುತ್ತದೆ. ಅದರಂತೆ ಆಸ್ಪತ್ರೆಯಲ್ಲಿದ್ದವರ ಎಲ್ಲ ಖರ್ಚನ್ನು ಸರ್ಕಾರವೇ ನೋಡಿಕೊಳ್ಳುತ್ತದೆ.
- ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ