ಸಾರಾಂಶ
ಶಿರಾಳಕೊಪ್ಪ: ಗೋಮಾತೆ ನಮ್ಮ ತಾಯಿ ಅವಳ ರಕ್ಷಣೆ ಮಾಡುವ ಕಾರ್ಯ ಪೋಲೀಸ್ ಇಲಾಖೆಯದ್ದು, ಅವರು ರಕ್ಷಣೆ ಮಾಡಬೇಕು ಇಲ್ಲವಾದರೆ ನಾವೇ ಮಾಡಿಕೊಳ್ಳುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಸತೀಶ್ ಪೂಜಾರ್ ದಿಕ್ಸೂಜಿ ತಿಳಿಸಿದರು.
ಗೋ ಹತ್ಯೆ ಮತ್ತು ಅಕ್ರಮ ಗೋವುಗಳನ್ನು ಸಾಗಾಣೆ ಮಾಡುತ್ತಿರುವದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾವರ್ಜನಿಕ ಸಭೆ ಸೋಮವಾರ ಸಂಜೆ ನಡೆಯಿತು.ಗಂಡು ಕರು ಇದ್ದಲ್ಲಿ ಸಾಕುವುದಾದರೆ ಸಾಕಿ ಸಾಧ್ಯವಾಗದೆ ಹೋದರೆ ಹಿಂದೂ ಜಾಗರಣದ ಕಾರ್ಯಕರ್ತರಿಗೆ ನೀಡಿ ಅವರು ಗೋ ಶಾಲೆಗೆ ತಲುಪಿಸುತ್ತಾರೆ. ಅಲ್ಲಿ ಗೋವುಗಳನ್ನು ಸಾಕಲಾಗುವದು. ದಿನನಿತ್ಯ ಗೋವುಗಳನ್ನು ಆಹಾರಕ್ಕಾಗಿ ಹತ್ಯೆ ಮಾಡುವದು ನಮ್ಮನ್ನು ಹೆತ್ತು, ಹೊತ್ತು, ಸಾಕಿದ ತಾಯಿಯನ್ನು ಹತ್ಯೆ ಮಾಡಿದಂತೆ. ಶಿರಾಳಕೊಪ್ಪದಲ್ಲಿ ೧೯೮೦ರ ಘಟನೆ ಮರುಕಳಿಸಬಾರದೆಂದರೆ ಗೋ ಹತ್ಯೆ ಅಂಗಡಿಗಳನ್ನು ಪೊಲೀಸ್ ಇಲಾಖೆ ನಿಲ್ಲಿಸಬೇಕು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಹೆದರಿಸುವ ಕೆಲಸ ಪೊಲೀಸ ಇಲಾಖೆ ಮಾಡಬಾರದು. ಗೋ ಹತ್ಯೆಯನ್ನು ಪೊಲೀಸರು ತಡೆಯಬೇಕು ಇಲ್ಲವಾದರೆ ನಾವು ತಡೆಯುತ್ತೇವೆ ಎಂದು ಎಚ್ಚರಿಸಿದರು.
ಲವ್ ಜಿಹಾದ್, ಮತಾಂತರ, ಗೋ ಹತ್ಯೆಯನ್ನು ಬಿಟ್ಟರೆ ಹಿಂದು ಮುಸ್ಲಿಮರು ಅಣ್ಣ ತಮ್ಮಂದಿರಾಗಿ ಇರುತ್ತೇವೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ದೇವರಾಜ್ ಅರಳಹಳ್ಳಿ ಮಾತನಾಡಿ, ಗೋ ಹತ್ಯೆ ತನಿಖೆ ನಡೆಸುವುದರಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಗೋವುಗಳ ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸ್ ಠಾಣೆಗೆ ಕಂಪ್ಲೇಟ್ ನೀಡಿದರೂ ಒಂದೂ ಗೋವು ಪತ್ತೆಯಾಗಿಲ್ಲ, ಗೋ ಹಂತಕರನ್ನು ಸಹ ಪತ್ತೆ ಮಾಡಿಲ್ಲ. ಆದ್ದರಿಂದ ನಾವು ದನದ ಕೊಟ್ಟಿಗೆಯಲ್ಲಿ ಸಿ.ಸಿ ಟಿವಿ ಹಾಕುವ ಪರಿಸ್ಥಿತಿ ಬಂದಿದೆ. ಇನ್ನುಮುಂದೆ ಹೋರಿ ಹಬ್ಬದ ಯುವಕರು ಗೋ ರಕ್ಷಣೆಗೆ ಬೀದಿಗೆ ಇಳಿಯುತ್ತಾರೆ ಎಂದು ಗೋ ಹಂತಕರನ್ನು ಎಚ್ಚರಿಸಿದರು.ಹಿರಿಯ ಮುಖಂಡ ಬಿ.ಎಸ್.ಮಠದ್ ಮಾತನಾಡಿ, ಇತಿಹಾಸ ಬದಲಿಸಿದ ಗಂಡು ಮೆಟ್ಟಿದ ನಾಡು ಶಿರಾಳಕೊಪ್ಪ. ದಷ್ಟರನ್ನು ಸಂಹಾರ ಮಾಡುವುದಕ್ಕೆ ದೇವತೆಗಳು ಅಸ್ತ್ರಗಳನ್ನು ಹೊಂದಿದ್ದರು ಎಂಬುದನ್ನು ಗಮನಿಸಬೇಕು. ಮಹಿಳೆಯರಿಗೆ ಅಷ್ಠ ಪುತ್ರ ಪ್ರಾಪ್ತಿರಸ್ತು ಎಂದು ಆಶೀರ್ವದಿಸಿ ಹುಟ್ಟುವ ಮಕ್ಕಳನ್ನು ದೇಶ ಸೇವೆಗೆ ಮುಡಿಪಾಡುವಂತೆ ಪ್ರೇರೇಪಿಸಬೇಕು ಎಂದರು.
ಸಭೆ ಆರಂಭಕ್ಕೂ ಮುನ್ನ ಸಾವಿರಾರು ಯುವಕರು ಹಾಗೆಯೇ ಸುತ್ತಮುತ್ತಲ ಗ್ರಾಮಗಳ ಹೋರಿ ಬೆದರಿಸುವ ಯುವಕರು ತಮ್ಮ ಹೋರಿಯೊಂದಿಗೆ ಮೆರವಣಿಗೆ ನಡೆಸಿದರು.ವಾಲ್ಮಿಕಿ ಭವನದಿಂದ ಪ್ರಾರಂಭವಾದ ಮೆರವಣಿಗೆ ಶಿಕಾರಿಪುರ ರಸ್ತೆಯಲ್ಲಿ ಸಾಗಿ ಬಸ್ಸ್ ನಿಲ್ದಾಣ ವೃತ್ತದಿಂದ ಹಿರೇಕೆರೂರ ರಸ್ತೆ ಪೋಲಿಸ್ ಠಾಣೆ ಪಕ್ಕದ ರಸ್ತೆಯಲ್ಲಿ ನೆಲೆಗೊಂಡಿತು. ಪಟ್ಟಣದಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಂದೋಬಸ್ತ ಮಾಡಲಾಗಿತ್ತು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ದೇವರಾಜ್ ಇನ್ನಿತರ ಪದಾಧಿಕಾರಿಗಳು ಇದ್ದರು.