ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಕೊಲೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಯಾವುದೇ ಕಾರಣಕ್ಕೂ ನಮ್ಮ ಕಾರ್ಯಕರ್ತರ ಕೊಲೆಗಳನ್ನು ಸಹಿಸುವುದಿಲ್ಲ. ಇದೇ ರೀತಿ ಮುಂದುವರೆದರೆ ಜನರೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.ಅಫಜಲ್ಪುರ ತಾಲೂಕಿನ ಸಾಗನೂರ ಗ್ರಾಮದಲ್ಲಿ ಕಳೆದ ವಾರ ಕೊಲೆಯಾದ ಬಿಜೆಪಿ ಯುವ ಮುಖಂಡ ಗಿರೀಶಬಾಬು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮಾತನಾಡಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಸಭೆ ಕರೆಯಲಾಗಿದೆ.ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು. ಅಲ್ಲದೇ ನಿಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವ ಬಗ್ಗೆ ತಿಳಿಸಲಾಗುವುದು.ನಿಮ್ಮ ಕುಟುಂಬಕ್ಕೆ ನಮ್ಮ ಇಡೀ ಬಿಜೆಪಿ ಪಕ್ಷ ಬೆಂಬಲವಾಗಿ ಇರುತ್ತದೆ.ಯಾರೂ ಹೆದರುವ ಅಗತ್ಯವಿಲ್ಲ ಎಂದು ಆತ್ಮಸ್ಥೈರ್ಯ ತುಂಬಿದರು.
ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ ನಮ್ಮ ಸಮಾಜದ ಉದಯೋನ್ಮೂಖ ನಾಯಕರಾಗಿದ್ದ ಗಿರೀಶಬಾಬು ಅವರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಈ ಕೊಲೆ ರಾಜಕೀಯ ಪ್ರೇರಿತವಾಗಿದೆ ಹೀಗಾಗಿ ಕೊಲೆ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಗಿರೀಶ ಕುಟುಂಬಸ್ಥರು ಮಾತನಾಡಿ ಗಿರೀಶಬಾಬು ಬಿಜೆಪಿ ಪಕ್ಷದ ಕಟ್ಟಾಳುವಾಗಿದ್ದ, ಯಾವಾಗ ಕೇಳಿದರೂ ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದ, ಅವನ ಶ್ರಮ, ಪಕ್ಷದ ಮೇಲಿನ ಬದ್ದತೆ ಗುರುತಿಸಿ ಸಂಸದರಾದ ಡಾ. ಉಮೇಶ ಜಾಧವ ಅವರು ಬಿಎಸ್‌ಎನ್‌ಎಲ್ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಿಸಿದ್ದರು. ಅವನ ಏಳಿಗೆ ಸಹಿಸದವರು ಸನ್ಮಾನ ಮಾಡುವ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದಾರೆ. ಕಾಣದ ಕೈಗಳ ಕೆಲಸ ಇಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಕೊಲೆಗೆ 40 ಲಕ್ಷಕ್ಕೆ ಸುಪಾರಿ ನೀಡಿದ್ದಾರೆ. ಹೀಗಾಗಿ ಕೊಲೆಯ ಕುರಿತು ಸಮಗ್ರ ತನಿಖೆ ಆಗಬೇಕು, ನಮ್ಮ ಕುಟುಂಬಕ್ಕೆ ಬೆದರಿಕೆ ಇದ್ದು ಸೂಕ್ತ ಭದ್ರತೆ ಒದಗಿಸುವಂತಾಗಬೇಕೆಂದು ಅಳಲು ತೋಡಿಕೊಂಡರು.
ಬಳಿಕ ಮೃತ ಗಿರೀಶಬಾಬು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ಬಸವರಾಜ್ ಮೂತ್ತಿಮೂಡ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಿವರಾಜ ಪಾಟೀಲ್ ರದ್ದೆವಾಡಗಿ, ಚಂದು ಪಾಟೀಲ್, ಅಮರನಾಥ ಪಾಟೀಲ್, ಅವ್ವಣ್ಣ ಮ್ಯಾಕೇರಿ, ರಿತೀಶ್ ಗುತ್ತೇದಾರ್, ದೇವಿಂದ್ರ ಜಮಾದಾರ, ಸಿದ್ದು ಸಾಲಿಮನಿ, ರವಿ ಪಾಟೀಲ್, ಮಲ್ಲು ಜಮಾದಾರ, ಚಂದ್ರಕಾಂತ ಕಿರಸಾವಳಗಿ, ಶಿವು ಗಾಣೂರ, ಸಂತೋಷ ಕಲ್ಲೂರ, ವಿಜು ವಡಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.