ಕಿಮ್ಸ್‌ ಇನ್ಮುಂದೆ ಕೆಎಂಸಿಆರ್‌ಐ

| Published : Sep 07 2024, 01:32 AM IST

ಕಿಮ್ಸ್‌ ಇನ್ಮುಂದೆ ಕೆಎಂಸಿಆರ್‌ಐ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕ ರೋಗಿಗಳ ಪಾಲಿಗೆ ಕಾಮಧೇನು, ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದ ಕೆಎಂಸಿ ಆಸ್ಪತ್ರೆಯನ್ನು ಪಕ್ಷಭೇದವಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಹುಬ್ಬಳ್ಳಿ: ಉತ್ತರ ಕರ್ನಾಟಕ ರೋಗಿಗಳ ಪಾಲಿಗೆ ಕಾಮಧೇನು, ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದ ಕೆಎಂಸಿ ಆಸ್ಪತ್ರೆಯನ್ನು ಪಕ್ಷಭೇದವಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಕೆಎಂಸಿ ಸಂಸ್ಥಾಪನಾ ದಿನಾಚರಣೆ ಹಾಗೂ ಕಿಮ್ಸ್‌ ಎಂಬುದನ್ನು ಕೆಎಂಸಿಆರ್‌ಐ ಎಂದು ಮರು ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಜನರಿಗೆ ಆರೋಗ್ಯ ವ್ಯವಸ್ಥೆ ಒದಗಿಸಲು ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ಹೊಂದಿದೆ. ಈ ಮೂಲಕ ಗ್ರಾಮೀಣ ಮಕ್ಕಳು ಸಹ ವೈದ್ಯರಾಗುವ ಅವಕಾಶಗಳು ಸೃಷ್ಟಿಯಾಗಿವೆ ಎಂದರು.

ಖಾಸಗಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಗೆ ರೋಗಿಗಳಿಗೆ ದುಬಾರಿ ವೆಚ್ಚವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜನರಿಗೆ ಅನುಕೂಲವಾಗಲೆಂದು ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಳನ್ನೂ ತೆರೆಯಲಾಗುತ್ತಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಕಾರ್ಯಾರಂಭ ಮಾಡಿದ್ದು, ಇನ್ನಷ್ಟು ಜಿಲ್ಲೆಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಸಚಿವರು ತಿಳಿಸಿದರು.

ರೋಬೋಟಿಕ್‌ ಸರ್ಜರಿ:

ಕೆಎಂಸಿಯಲ್ಲಿ ಚಿಕ್ಕಮಕ್ಕಳ ಆಸ್ಪತ್ರೆ, ರೋಬೊಟಿಕ್‌ ಸರ್ಜರಿ, ನೆಪ್ರೋ ಯುರಾಲಜಿ ಸಂಸ್ಥೆ, ವ್ಯಾಸ್ಕೂಲರ್‌ ಸರ್ಜರಿ ವಿಭಾಗ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಳಿದ್ದಾರೆ. ಇವುಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ನಿಲುಕದಂತಾಗಿದೆ. ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಬೇಕು ಎಂದರು.

ತೆರೆದ ಹೃದಯ ಚಿಕಿತ್ಸೆ, ಕಿಡ್ನಿ ಕಸಿಯನ್ನು ಸಂಸ್ಥೆಯಲ್ಲಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಸ್ಥೆಗೆ ಇರುವ ಬಡವರ ಸಂಜೀವಿನಿ ಎಂಬ ಹೆಸರು ಅಳಿಯದಂತೆ ಕಾಪಾಡಬೇಕಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಡಾ.ಚಂದ್ರು ಲಮಾಣಿ, ಎನ್‌ ಎಚ್‌ ಕೋನರೆಡ್ಟಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಸಂಸದ ಐ.ಜಿ. ಸನದಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಅನಿಲ್‌ ಪಾಟೀಲ, ಶಹಜಾದ ಮುಜಾಹಿದ, ಕಿಮ್ಸ್‌ ಆಡಳಿತ ಮಂಡಳಿ ಸದಸ್ಯ ರೋಣದ ಸೇರಿದಂತೆ ಹಲವು ಮುಖಂಡರು ಇದ್ದರು.

ನೀಟ್‌ ಪಿಜಿ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೂರನೇ ಮತ್ತು ಮೊದಲ ಸ್ಥಾನ ಗಳಿಸಿದ ಡಾ. ಸಾಯಿಕುಮಾರ ಸಾಧುನವರ ಅವರನ್ನು ಸಚಿವರು ಸನ್ಮಾನಿಸಿದರು. ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಸ್ವಾಗತಿಸಿದರು.

ಕೆಎಂಸಿ ಕಾಲೇಜಿನ ಮುಖ್ಯ ಕಟ್ಟಡದ ಮೇಲೆ ಅಳವಡಿಸಿದ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಾಮಫಲಕವನ್ನು ಸಚಿವ ಡಾ. ಪಾಟೀಲ ಅನಾವರಣಗೊಳಿಸಿದರು. ಬಳಿಕ ಬಲೂನ್‌ಗಳನ್ನು ಹಾರಿ ಬಿಟ್ಟು ಸಂತಸ ವ್ಯಕ್ತಪಡಿಸಿದರು.