ಕಿನ್ನಾಳ ತ್ಯಾಜ್ಯ ಮುಕ್ತ ಗ್ರಾಮಕ್ಕೆ ಸಂಕಲ್ಪ

| Published : Sep 24 2024, 01:49 AM IST

ಸಾರಾಂಶ

ಗಾಂಧಿ ಜಯಂತಿ ನಿಮಿತ್ತ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡುವ ಕುರಿತು ಸಂಕಲ್ಪ ಮಾಡಲಾಗಿದ್ದು, ಈ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಭೆ

ಅಕ್ಟೋಬರ್ 2ರಂದು ಸ್ವಚ್ಛತಾ ಆದೋಲನ ಹಾಗೂ ಕಿನ್ನಾಳ ಗ್ರಾಮ ದತ್ತು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಾತ್ಮಾಗಾಂಧಿ ಜಯಂತಿ ನಿಮಿತ್ತ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡುವ ಕುರಿತು ಸಂಕಲ್ಪ ಮಾಡಲಾಗಿದ್ದು, ಈ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ " ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ " ಅಂಗವಾಗಿ ಕಿನ್ನಾಳ ಗ್ರಾಮದಲ್ಲಿ ಅಕ್ಟೋಬರ್ 2ರಂದು ಸ್ವಚ್ಛತಾ ಆದೋಲನ ಹಾಗೂ ಕಿನ್ನಾಳ ಗ್ರಾಮ ದತ್ತು ಕಾರ್ಯಕ್ರಮದ ಅಂಗವಾಗಿ ಈ ಸಂಕಲ್ಪ ಮಾಡಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಸಂಗಪ್ಪ ದರಗದ ಮಾತನಾಡಿ, ಗ್ರಾಮದ ರಸ್ತೆ , ಹಸಿ ಮತ್ತು ಒಣ ಕಸದ ವಿಲೇವಾರಿ, ಮನೆಯ ಸುತ್ತ ಸ್ವಚ್ಛತೆಯ ವಿಷಯವಾಗಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲು ಜಿಲ್ಲಾ ನ್ಯಾಯಾಲಯ ತಮ್ಮೊಂದಿಗೆ ಇದೆ ಎಂದು ತಿಳಿಸಿದರು.

ಸಿವಿಲ್ ಹೆಚ್ಚುವರಿ ನ್ಯಾಯಾಧೀಶ ಕುಮಾರ ಡಿ.ಕೆ. ಮಾತನಾಡಿ, ಊರು ಸ್ವಚ್ಛವಾಗಿದ್ದರೆ ಜನರ ಆರೋಗ್ಯ ಸ್ವಾಸ್ಥ್ಯವಾಗಿರುತ್ತದೆ. ಪ್ರಕೃತಿಯನ್ನು ನಾವು ಕಾಪಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಮುಂದಿನ ದಿನಗಳಲ್ಲಿ ಕಿನ್ನಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಮಾತನಾಡಿ, ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಜನ ಸಾಮಾನ್ಯರಲ್ಲಿ ಹಾಗೂ ಶಾಲಾ ಮಕ್ಕಳಿಗೆ ಕಾನೂನಿನ ಅರಿವು ಜಾಗೃತಿ ಮೂಡಿಸುವುದರ ಜೊತೆಗೆ ನ್ಯಾಯಾಲಯದಲ್ಲಿ ಇರುವ ಬಾಕಿ ವ್ಯಾಜ್ಯಗಳನ್ನು ಗ್ರಾಮದಲ್ಲಿಯೇ ವಿಲೇವಾರಿ ಮಾಡುವುದು, ವ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲಾಗುವುದು ಎಂದರು.ಕಿನ್ನಾಳ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕಿನ್ನಾಳ ಗ್ರಾಮವನ್ನು ದತ್ತು ಪಡೆಯಲಾಗುತ್ತಿದೆ. ಗ್ರಾಮದ ಸ್ವಚ್ಛತೆಗಾಗಿ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುವುದರ ಕುರಿತು ತಿಳಿಸಿದರು. ಜತೆಗೆ ಶಾಲಾ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು, ಪ್ಲಾಸ್ಟಿಕ್ ಮುಕ್ತ ಮಾಡುವುದು, ಗ್ರಾಮದ ನೈರ್ಮಲ್ಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು ಎಂದು ತಿಳಿಸಿದರು

ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ಒದಗಿಸುವುದು, ಕುಡಿವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ, ಕಿನ್ನಾಳ ಡ್ಯಾಂ ಅಭಿವೃದ್ಧಿ ಪಡಿಸುವುದು, ಕಿನ್ನಾಳ ಕಲೆಗೆ ಸೂಕ್ತ ಸ್ಥಾನಮಾನ ನೀಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲನ್ಸ್‌ ಒದಗಿಸುವುದು, ಪ್ರತ್ಯೇಕ ಬಾಲಕಿಯರ ಪ್ರೌಢಶಾಲೆ, ವಾರ್ಡ್ ನಂ 06ರಲ್ಲಿ ಸಮುದಾಯ ಶೌಚಾಲಯದ ವ್ಯವಸ್ಥೆ, ಸಮರ್ಪಕವಾದ ಸರ್ಕಾರಿ ಬಸ್ ವ್ಯವಸ್ಥೆ, ಮದ್ಯಪಾನ ಅಂಗಡಿ ಸ್ಥಳಾಂತರಗೊಳಿಸುವ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ವೇಳೆ ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.