ಸಾರಾಂಶ
ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ, ಮೂಲಸೌಕರ್ಯ ವಿಚಾರಕ್ಕೆ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಕಿರಣ್ ಶಾ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಸತತವಾಗಿ ಬೆಂಗಳೂರಿನ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದು, ಇದಕ್ಕೆ ಸರ್ಕಾರದ ಪ್ರತಿನಿಧಿಗಳೂ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಕಿರಣ್ ಶಾ ಅವರು ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ್ದು, ನಗರದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ ಅವರು ತಮ್ಮ ಸೋದರಳಿಯನ ಮದುವೆಗೆ ಆಹ್ವಾನ ನೀಡಿ ದೀಪಾವಳಿಗೆ ಶುಭಾಶಯ ತಿಳಿಸಲು ಬಂದಿದ್ದರು ಎನ್ನಲಾಗಿದೆ.
ಅಭಿವೃದ್ಧಿಗೆ ನೆರವಿನ ಭರವಸೆ-ಡಿಕೆಶಿ:
ಕಿರಣ್ ಶಾ ಅವರು ತಮ್ಮನ್ನು ಭೇಟಿ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದೆವು. ಅವರೆಲ್ಲರೂ ಬೆಂಗಳೂರಿಗೆ ಸಹಕಾರ ನೀಡುತ್ತೇವೆ, ಬೆಂಗಳೂರಿಗೆ ಧಕ್ಕೆ ತರುವುದಿಲ್ಲ ಎಂದು ಹೇಳಿದ್ದಾರೆ. ವ್ಯವಸ್ಥೆ ಜೊತೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
24ರಂದು ಸಭೆ ನಡೆಸುತ್ತೇನೆ:
ಜಿಬಿಎ ವ್ಯಾಪ್ತಿ ಹೊರತಾಗಿ ಬೆಂಗಳೂರಿನ ಹೊರ ಭಾಗದಲ್ಲಿರುವ ಸ್ಥಳೀಯ ಪಾಲಿಕೆಗಳನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದೇನೆ. ಬುಧವಾರ ಅಥವಾ ಗುರುವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಶುಕ್ರವಾರ ಅವರ ಜೊತೆ ಸಭೆ ಮಾಡುತ್ತೇನೆ. ಆ ಭಾಗದ ತೆರಿಗೆ ಆದಾಯಕ್ಕೂ, ಬೆಂಗಳೂರಿನ ತೆರಿಗೆ ಆದಾಯಕ್ಕೂ ಭಾರಿ ವ್ಯತ್ಯಾಸವಿದೆ. ಹೀಗಾಗಿ ಆ ಪ್ರದೇಶದ ಅಭಿವೃದ್ಧಿ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಾಳಾಗಿರುವ ರಸ್ತೆಗಳ ಪಟ್ಟಿ ನೀಡಿದರೇ ಎಂದು ಕೇಳಿದಾಗ, ಯಾವ ರಸ್ತೆ ಪಟ್ಟಿಯೂ ಇಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಐಟಿ- ಬಿಟಿ ಕ್ಷೇತ್ರದವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈಗ ಎಲ್ಲಾ ಪಾಲಿಕೆ ವ್ಯಾಪ್ತಿಯ ನಾಗರಿಕರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಮುಂದೆ ಕಂಪನಿಗಳ ಜೊತೆ ಚರ್ಚೆ ಮಾಡುವೆ. ನಂತರ ಬೆಂಗಳೂರು ಹೊರವಲಯದವರ ಜೊತೆ ಸಭೆ ಮಾಡಿ ಜನರಿಗೆ ಒಳ್ಳೆಯದಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಡಿಕೆಶಿ-ಕಿರಣ್ ಮಜುಂದಾರ್ ಷಾ
ನಡುವೆ ‘ಎಕ್ಸ್’ನಲ್ಲಿ ವಾಕ್ಸಮರ
ಇದಕ್ಕೂ ಮೊದಲು ಬೆಂಗಳೂರಿನ ಗುಂಡಿ ಸಮಸ್ಯೆ, ಮೂಲಸೌಕರ್ಯ ಕೊರತೆ ಕುರಿತು ಉದ್ಯಮಿ ಕಿರಣ್ ಮಜುಂದಾರ್ ಷಾ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆದಿತ್ತು.
ಬೆಂಗಳೂರಿನ ಮೂಲಸೌಕರ್ಯ ಟೀಕಿಸಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಷಾ ಇಬ್ಬರಿಗೂ ವೈಯಕ್ತಿಕ ಅಜೆಂಡಾ ಇದ್ದಂತಿದೆ. ಈ ವಿಚಾರವನ್ನು ನಾವು ಹ್ಯಾಂಡಲ್ ಮಾಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದ್ದರು.ಇದಕ್ಕೆ ಕಿರಣ್ ಮಜುಂದಾರ್ ಷಾ, ‘ಇದು ಸುಳ್ಳು ನಾವು ಬಿಜೆಪಿ-ಜೆಡಿಎಸ್ ಅವಧಿಯಲ್ಲೂ ಪ್ರಶ್ನಿಸಿದ್ದೆವು’ ಎಂದು ಸಮರ್ಥನೆ ನೀಡಿದ್ದರು. ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರನ್ನೂ ಭೇಟಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.