ಅಡುಗೆ ಕೋಣೆ ನಿರ್ಮಾಣ ವಿಳಂಬ: ಶಾಸಕ ಬಣಕಾರ ಗರಂ

| Published : Jan 02 2025, 12:30 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಮಕರಿ, ನೇಶ್ವಿ, ಹುಲ್ಲತ್ತಿ, ಹಿರೇಮೊರಬ, ರಾಮತೀರ್ಥ, ಗುಡ್ಡದಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಎನ್ಆರ್‌ಜಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದ ಅಡುಗೆ ಕೋಣೆ ಮಂಜೂರಾಗಿ 3-4 ತಿಂಗಳು ಕಳೆದರೂ ಕಾಮಗಾರಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಶಾಸಕ ಯು.ಬಿ.ಬಣಕಾರ ಅಸಮಾಧಾನ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ: ತಾಲೂಕಿನ 6 ಸರ್ಕಾರಿ ಶಾಲೆಗಳಿಗೆ ಎನ್‌ಆರ್‌ಐಜಿ ಯೋಜನೆಯಲ್ಲಿ ಮಂಜೂರಾದ ಅಡುಗೆ ಕೋಣೆ ನಿರ್ಮಾಣ ಮಾಡುವಲ್ಲಿ ವಿಳಂಬವಾದ್ದರಿಂದ ಸಂಬಂಧಪಟ್ಟ ಪಿಡಿಒಗಳ ವಿರುದ್ಧ ಶಾಸಕ ಯು.ಬಿ. ಬಣಕಾರ ಗರಂ ಆದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಮಕರಿ, ನೇಶ್ವಿ, ಹುಲ್ಲತ್ತಿ, ಹಿರೇಮೊರಬ, ರಾಮತೀರ್ಥ, ಗುಡ್ಡದಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಎನ್ಆರ್‌ಜಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದ ಅಡುಗೆ ಕೋಣೆ ಮಂಜೂರಾಗಿ 3-4 ತಿಂಗಳು ಕಳೆದರೂ ಕಾಮಗಾರಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಪಿಡಿಒಗಳನ್ನು ಕರೆಸಿ, ಒಂದು ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಿ, ಯಾವುದೇ ಅಡೆತಡೆಗಳಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು.

ಜಿಲ್ಲೆಯ ಪ್ರತಿ ತಾಲೂಕಿನ 6 ಸರ್ಕಾರಿ ಶಾಲೆಗಳಿಗೆ ಅಡುಗೆ ಕೋಣೆ ಮಂಜೂರು ಮಾಡಿ ಆದೇಶ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹10 ಲಕ್ಷ ಅನುದಾನ ನೀಡಿದ್ದಾರೆ. ಮುಂದಿನ ಜಿಪಂ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರೆ ಏನು ಉತ್ತರ ನೀಡುತ್ತೀರಿ? ಪಿಡಿಒಗಳ ನಿರ್ಲಕ್ಷ್ಯದಿಂದ ಜಿಪಂ ಸಿಇಒ ತಲೆತಗ್ಗಿಸುವಂತಾಗುತ್ತದೆ. ಕಾರಣ ತಕ್ಷಣ ಕಾರ್ಯಪ್ರವೃತ್ತರಾಗಿ, ಕ್ರಿಯಾಯೋಜನೆ ಸಿದ್ಧಪಡಿಸಿ ಸಂಬಂಧಿಸಿದ ಇಲಾಖೆಗೆ ನೀಡಿ, ಪರವಾನಗಿ ಪಡೆದು ಕಾಮಗಾರಿಗೆ ಚಾಲನೆ ನೀಡಿ ಎಂದು ಪಿಡಿಒಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಅಕ್ಷರ ದಾಸೋಹ ಅಧಿಕಾರಿ ಎಚ್.ಎಚ್. ಜಾಡರ, ಪಂಚಾಯತ್ ರಾಜ್‌ ಸಹಾಯಕ ನಿರ್ದೇಶಕ ದೇವರಾಜ ಸಣ್ಣಕಾರ್ಗೆರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.