ಕಿತ್ತೂರು ರಾಣಿ ಚನ್ನಮ್ಮಾಜಿ ಹೋರಾಟಗಾರರ ತಾಯಿ: ಪ್ರೊ.ಸಿ.ಎಂ. ತ್ಯಾಗರಾಜ

| Published : Oct 27 2024, 02:30 AM IST

ಸಾರಾಂಶ

ಹೋರಾಟ ಬಾಹಿಕ ಸ್ಫೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹೋರಾಟ ಬಾಹಿಕ ಸ್ಫೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಣಿ ಚನ್ನಮ್ಮನ ಐತಿಹಾಸಿಕ ವಿಜಯದ 200ನೇ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರುಷರ ಬಹುತೇಕ ಹೋರಾಟ ಅಧಿಕಾರದ ಪ್ರತೀಕವಾದರೆ, ಪ್ರತಿ ಹೆಣ್ಣಿನ ಹೋರಾಟದ ಹಿಂದೆ ಈ ನೆಲದ ಸಂಸ್ಕೃತಿಯ, ಸ್ವಾಭಿಮಾನದ ಕಿಚ್ಚು ಅಡಗಿದೆ. ಈ ನೆಲದ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆ ಬಂದಾಗ ಪ್ರತಿ ಹೆಣ್ಣು ಶತ್ರುಗಳ ವಿರುದ್ಧ ರಣಾಂಗಣದಲ್ಲಿ ಹೋರಾಡಿರುವುದು ನಾಡಿನ ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಕನ್ನಡನಾಡು ಕ್ಷಾತ್ರತೇಜದ ದೊಡ್ಡ ಪರಂಪರೆಯನ್ನೇ ಹೊಂದಿದೆ. ಚನ್ನಮ್ಮನ ಕ್ಷಾತ್ರತೇಜದ ಪರಂಪರೆಯಿಂದಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸ್ಫೂರ್ತಿ ನೀಡಿತು. ಆರ್ಥಿಕವಾಗಿ ಸೊರಗಿದ ಕುಟುಂಬದ ಮಕ್ಕಳು ಆರ್ಥಿಕವಾಗಿ ಮುಂದುವರಿದಿರುವ ಕುಟುಂಬದ ಮಕ್ಕಳಿಗಿಂತ ಬದುಕಿನಲ್ಲಿ ಹೆಚ್ಚು ಗಟ್ಟಿಯಾಗಿ, ಧೈರ್ಯ, ಸ್ಥೈರ್ಯದಿಂದ ಸ್ವಂತ ಬದುಕನ್ನು ಕಟ್ಟಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಜೀವನವು ಚನ್ನಮ್ಮನ ಹೋರಾಟದಂತಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಚವಿ ಸಿಂಡಿಕೇಟ್ ಸದಸ್ಯರಾದ ಮಹಾಂತೇಶ ಕಂಬಾರ ಮಾತನಾಡಿ, ಅಂದು ರಾಣಿ ಚನ್ನಮ್ಮ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದಳು. ಅವಳ ಸಾಹಸ, ಹೋರಾಟಗಳು ಸಮಾಜಕ್ಕೆ ಸ್ಫೂರ್ತಿ ಎಂದು ಹೇಳಿದರು.

ರಾಚವಿಯ ವಿದ್ಯಾವಿಷಯಕ ಪರಿಷತ್ತಿನ ಸದಸ್ಯೆ ಡಾ.ನಿರ್ಮಲಾ ಬಟ್ಟಲ ಕಿತ್ತೂರು ಚನ್ನಮ್ಮನ ಕುರಿತು ವಿಶೇಷ ಉಪನ್ಯಾಸ ನೀಡಿ ಸಂಸ್ಥಾನದ ಏಳಿಗೆ, ಅವನತಿಯ ಚರಿತ್ರೆ ಕುರಿತು ವಿವರಿಸಿದರು. ಹಣಕಾಸು ಅಧಿಕಾರಿ ಎಂ.ಎ. ಸಪ್ನಾ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ಜಿ. ಹೆಗಡೆ, ಹಿರಿಯ ಸಾಹಿತಿ ಯ.ರು. ಪಾಟೀಲ, ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ನಾಗರತ್ನ ಪರಾಂಡೆ ಇದ್ದರು. ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ದೇಶಭಕ್ತಿಗೀತೆ ಹಾಗೂ ಡ್ರಾಯಿಂಗ್ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪುಸ್ತಕ ಮತ್ತು ಪ್ರಮಾಣಪತ್ರ ನೀಡಲಾಯಿತು. ಗಾಯತ್ರಿ ಹಲಗಿ ಸ್ವಾಗತಿಸಿದರು. ಅಧ್ಯಯನ ಪೀಠದ ಸಂಯೋಜಕ ಡಾ.ಮಹೇಶ ಗಾಜಪ್ಪನರ ವಂದಿಸಿದರು. ಡಾ.ಪ್ರೀತಿ ಪದಪ್ಪಗೋಳ ಪರಿಚಯಿಸಿದರು. ಶಾಂಭವಿ ಥೋರ್ಲಿ ನಿರೂಪಿಸಿದರು.ನಮ್ಮ ಅಧ್ಯಯನ ಪೀಠದಿಂದ ನಾನು ಚನ್ನಮ್ಮ ನಾನೂ ಚನ್ನಮ್ಮ ಎಂಬ ಕಿರು ಹೊತ್ತಿಗೆ ಹೊರತರುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಮೇಲಾದ ಚನ್ನಮ್ಮನ ಪ್ರಭಾವದ ಕುರಿತು ಲೇಖನ ಬರೆದು ಕೊಡಿ. ಅದೆಲ್ಲವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಅಂದು ಚನ್ನಮ್ಮ ಬ್ರಿಟಿಷರ ವಿರುದ್ಧ ಖಡ್ಗದಿಂದ ಕಿಡಿ ಹೊತ್ತಿಸಿದರೆ, ಇಂದಿನ ಹೆಣ್ಣು ಮಕ್ಕಳು ಲೇಖನಿಯ ಕಿಡಿಯ ಮೂಲಕ ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಿ ವ್ಯವಸ್ಥೆ ಸುಧಾರಿಸಲು ಕೈಜೋಡಿಸಬೇಕು. ಅದುವೇ ರಾಣಿ ಚನ್ನಮ್ಮನಿಗೆ ಕೊಡುವ ಅತೀ ದೊಡ್ಡ ಗೌರವ.

-ಸಂತೋಷ ಕಾಮಗೌಡ ಕುಲಸಚಿವ ರಾಣಿ ಚನ್ನಮ್ಮ ವಿವಿ ಬೆಳಗಾವಿ