ಮಹಿಳಾ ಮೀಸಲಾತಿ ಬಿಲ್ ಜಾರಿ ಆದರೆ 73 ಮಹಿಳಾ ಅಭ್ಯರ್ಥಿಗಳಿಗೆ 2028ರ ವಿಧಾನಸಭೆ ಚುನಾವಣೆಗೆ ಟಿಕೆಟ್

| N/A | Published : Mar 09 2025, 01:47 AM IST / Updated: Mar 09 2025, 09:49 AM IST

ಮಹಿಳಾ ಮೀಸಲಾತಿ ಬಿಲ್ ಜಾರಿ ಆದರೆ 73 ಮಹಿಳಾ ಅಭ್ಯರ್ಥಿಗಳಿಗೆ 2028ರ ವಿಧಾನಸಭೆ ಚುನಾವಣೆಗೆ ಟಿಕೆಟ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಂದಿದ್ದೇ ಆದರೆ, 2028ರಲ್ಲಿ ರಾಜ್ಯದ ವಿಧಾನಸಭೆಗೆ 73 ಮಹಿಳಾ ಅಭ್ಯರ್ಥಿಗಳನ್ನು ಹುಡುಕಬೇಕಾಗುತ್ತದೆ. ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

  ಬೆಂಗಳೂರು : ಪ್ರಧಾನಿ ನರೇಂದ್ರ  ಮೋದಿಯವರು ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಂದಿದ್ದೇ ಆದರೆ, 2028ರಲ್ಲಿ ರಾಜ್ಯದ ವಿಧಾನಸಭೆಗೆ 73 ಮಹಿಳಾ ಅಭ್ಯರ್ಥಿಗಳನ್ನು ಹುಡುಕಬೇಕಾಗುತ್ತದೆ. ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ 6 ಸಂಸ್ಥೆಗಳು, 20 ಮಹಿಳಾ ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹೆಂಗಸರು ಮನೆ ಜವಾಬ್ದಾರಿ ಜೊತೆಗೆ ಸಾಮಾಜಿಕ ಜೀವನ, ರಾಜಕೀಯದಲ್ಲೂ ಮುಂದೆ ಬರಬೇಕು. ನಾನು ರಾಜಕಾರಣ ಹಿನ್ನೆಲೆಯಿಲ್ಲದ ಸಾಮಾನ್ಯ ಕುಟುಂಬದ ಮಹಿಳೆ. ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಪ್ರವೇಶಿಸಿದೆ ಎಂದರು.

ಗುರಿ ತಲುಪಬೇಕು ಎಂಬ ಸಂಘರ್ಷದಲ್ಲಿ ಅನೇಕ ಅವಮಾನಗಳನ್ನು ಎದುರಿಸಿ, ಸನ್ಮಾನ ಪಡೆದು ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನನಗೆ ಯಾರೂ ರೆಡ್ ಕಾರ್ಪೆಟ್‌ ಹಾಕಿ ರಾಜಕೀಯಕ್ಕೆ ಕರೆದಿಲ್ಲ. ಆದರೆ, ಸಚಿವೆಯಾಗಿರುವ ಕಾರಣ ಈಗ ರೆಡ್ ಕಾರ್ಪೆಟ್‌ ಹಾಕಿ ಬರಮಾಡಿಕೊಳ್ಳುತ್ತಾರೆ. 2028ರಲ್ಲಿ ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿ ಅನುಷ್ಠಾನ ಮಾಡಿದರೆ 73 ಅಭ್ಯರ್ಥಿಗಳನ್ನು ಹುಡುಕಬೇಕು. ಈ ಸಮಾರಂಭದಲ್ಲಿರುವ ಎರಡ್ಮೂರು ಮಹಿಳೆಯರೇ ಅಭ್ಯರ್ಥಿಗಳು ಆಗಬಹುದು. ಆದರೆ, ಅದಕ್ಕೆ ಗುರಿ ಮತ್ತು ಸಾಧನೆಯ ಛಲ ಬೇಕು ಎಂದು ಕಿವಿಮಾತು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರು. ಗೌರವಧನ ಹೆಚ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಸಚಿವೆ ತಿಳಿಸಿದರು.

ಮಾಜಿ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿ ಜಾರಿಗೆ ತಂದರು. ನಂತರದ ವರ್ಷಗಳಲ್ಲಿ ಅನೇಕ ಮಹಿಳೆಯರು ರಾಜಕೀಯ ಪ್ರವೇಶಿಸಿದರು. ರಾಜೀವ್ ಗಾಂಧಿ ನಮಗೆ ಸ್ಪೂರ್ತಿ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಹಣ ಬಹಳ ಮುಖ್ಯ. ನಾವು ಹಣ ಗಳಿಸಿದರೆ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಸ್ವತಂತ್ರ, ಸ್ವಾಭಿಮಾನಿ ಜೀವನ ನಡೆಸಲು ಸಾಧ್ಯ. ಹೀಗಾಗಿ, ಹೆಂಗಸರು ಮನೆಯಿಂದ ಹೊರ ಬಂದು ಪುರುಷ ಸಮಾನವಾಗಿ ದುಡಿಯಬೇಕು. ಹಣ ಗಳಿಸಬೇಕು. ಕಟ್ಟುಪಾಡುಗಳನ್ನು ಮೀರಿ ಹೊರ ಬರಬೇಕು ಎಂದು ನುಡಿದರು.

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 6 ಸಂಸ್ಥೆಗಳು ಹಾಗೂ 20 ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ಯಶೋಧರಮ್ಮ ದಾಸಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಉದಯ್ ಗರುಡಾಚಾರ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಸೇರಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

50 ವಯಸ್ಸಿನವಳಂತೆ ಕಾಣುಸುತ್ತೇನಾ?

ನನಗೆ 50 ವರ್ಷ. ನಾನು ಹುಟ್ಟಿದ್ದು 1975ರಲ್ಲಿ. 49 ಮುಗಿದು 50 ಶುರುವಾಗಿದೆ. ಆದರೆ ನಾನು 50 ವರ್ಷದವಳಂತೆ ಕಾಣಿಸುತ್ತೇನಾ? ವಯಸ್ಸು ಏನೂ ಅಲ್ಲ. ಈ 50 ವರ್ಷದಲ್ಲಿ ನಾವು ಏನು ಸಾಧನೆ ಮಾಡಿದ್ದೇವೆ ಮತ್ತು ಮುಂದಿನ ಗುರಿ ಏನು ಎಂಬುದು ಮುಖ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.