ಸಾರಾಂಶ
ಕೊಪ್ಪಳ: ಭಾರತದಲ್ಲಿ ಸಾವಿರಾರು ರಾಜ ಸಂಸ್ಥಾನಗಳಿದ್ದರೂ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದ ಕೆಚ್ಚೆದೆಯ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ರಾಜಮನೆತನಗಳು ಭಾಗಿಯಾಗಿರುವುದನ್ನು ನಾವು ಕಾಣಬಹುದು. ಅದರಲ್ಲೂ ತುಂಬಾ ವಿಶೇಷವಾಗಿ ಕಿತ್ತೂರು ಸಂಸ್ಥಾನ ಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಯುದ್ದದಲ್ಲಿ ವಿಜಯವನ್ನು ಸಾಧಿಸಿರುವುದನ್ನು ನಾವು ಕಾಣುತ್ತೇವೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಜೊತೆಗೆ ಅವರ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣನವರ ಸಾಹಸವನ್ನೂ ನಾವು ಸ್ಮರಿಸಬೇಕಿದೆ. ಹಾಗಾಗಿ ನಮ್ಮ ಸರ್ಕಾರ ಕಿತ್ತೂರು ಮತ್ತು ಸಂಗೊಳ್ಳಿ ಅಭಿವೃದ್ಧಿಗಾಗಿ ಸುಮಾರು ₹34 ಕೋಟಿ ಅನುದಾನವನ್ನು ನೀಡಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮಹಿಳೆಯರೂ ಕೆಚ್ಚೆದೆಯಿಂದ ಹೋರಾಡಬಲ್ಲರು ಎಂದು ತೋರಿಸಿಕೊಟ್ಟರು. 2017ರಲ್ಲಿ ನಮ್ಮ ಸರ್ಕಾರ ರಾಣಿ ಚೆನ್ನಮ್ಮನ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಆದೇಶವನ್ನು ಹೊರಡಿಸಿತು. ಅವರಂತಹ ಸಾಹಸಿಗರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಪಂಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಸ್ವಾತಂತ್ಯ ಪೂರ್ವ ನಮ್ಮ ದೇಶದಲ್ಲಿದ್ದ ಸುಮಾರು 500ಕ್ಕೂ ಅಧಿಕ ರಾಜ ಸಂಸ್ಥಾನಗಳಲ್ಲಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ. ಆಗ ಅನೇಕ ರಾಜರು ಬ್ರಿಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ, ಚೆನ್ನಮ್ಮ ರಾಜಿ ಆಗದೆ, ಸ್ವಾತಂತ್ರ‍್ಯವನ್ನು ಬಯಸಿ, ಅವರ ವಿರುದ್ಧ ಹೋರಾಡಿದರು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ ಅವರು ದೇಶಕ್ಕೆ ಸ್ವಾತಂತ್ರ್ಯ ತರಬೇಕೆಂದು ಮೊದಲು ಧ್ವನಿ ಎತ್ತಿದವರು. ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪಿಸಬೇಕು ಹಾಗೂ ಮೀಸಲಾತಿ ಕುರಿತಂತೆ ಇರುವ ಸಮಾಜದ ಬೇಡಿಕೆಯನ್ನು ಈಡೇರಿಸಲು ಶಾಸಕರು ನಮ್ಮ ಸಮಾಜದ ಪರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ ಅವರು ಕಿತ್ತೂರ ಚೆನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಉಪ ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಕೊಪ್ಪಳ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ಮುಖಂಡರಾದ ಡಾ. ಬಸವರಾಜ ಕ್ಯಾವಡ್ಕರ್, ಕರಿಯಪ್ಪ ಮೇಟಿ, ಸುಮಂಗಲಾ ಹಂಚಿನಾಳ, ಪ್ರತಿಮಾ ಪಟ್ಟಣಶೆಟ್ಟಿ, ಸುಜಾತಾ ಪಟ್ಟಣಶೆಟ್ಟಿ, ಬಿ.ಎಸ್. ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))