ಕೆಎಂಸಿ: ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ ಸಂಪನ್ನ

| Published : Apr 24 2024, 02:17 AM IST

ಸಾರಾಂಶ

1975ರಲ್ಲಿ ಅಮೆರಿಕನ್ ಸೊಸೈಟಿ ಫಾರ್ ಮೆಡಿಕಲ್ ಟೆಕ್ನಾಲಾಜಿ ಆರೋಗ್ಯ ರಕ್ಷಣೆಯಲ್ಲಿ ಪ್ರಯೋಗಾಲಯ ವೃತ್ತಿಪರರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ದಿನಾಚರಣೆಯನ್ನು ಆರಂಭಿಸಿತು. ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಯ ವತಿಯಿಂದಲೂ ಈ ಸಪ್ತಾಹದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಅಂತಾರಾಷ್ಟ್ರೀಯ ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹವನ್ನು ಏ.14ರಿಂದ 20ರ ವರೆಗೆ ಆಚರಿಸಲಾಗುತ್ತದೆ. ಈ ವರ್ಷ ‘ಭವಿಷ್ಯವೇ ಪ್ರಯೋಗಾಲಯ’ ಎಂಬ ಧ್ಯೇಯವಾಕ್ಯ ನೀಡಲಾಗಿದ್ದು, ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಯ ವತಿಯಿಂದಲೂ ಈ ಸಪ್ತಾಹದ ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, 1975ರಲ್ಲಿ ಅಮೆರಿಕನ್ ಸೊಸೈಟಿ ಫಾರ್ ಮೆಡಿಕಲ್ ಟೆಕ್ನಾಲಾಜಿ ಆರೋಗ್ಯ ರಕ್ಷಣೆಯಲ್ಲಿ ಪ್ರಯೋಗಾಲಯ ವೃತ್ತಿಪರರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ದಿನಾಚರಣೆಯನ್ನು ಆರಂಭಿಸಿತು. ಪ್ರಯೋಗಾಲಯದ ವೃತ್ತಿಪರರ ದಣಿವರಿಯದ ಪ್ರಯತ್ನಗಳನ್ನು ನಾವು ಶ್ಲಾಘಿಸಬೇಕು. ಅವರ ನಿಖರವಾದ ಮತ್ತು ಸಮಯೋಚಿತ ಪರೀಕ್ಷಾ ಫಲಿತಾಂಶಗಳು ರೋಗಿಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ಒಟ್ಟಾರೆ ಆರೋಗ್ಯದ ಫಲಿತಾಂಶಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಿದರು.ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು, ‘ಭವಿಷ್ಯವೇ ಪ್ರಯೋಗಾಲಯ’ ಎಂಬ ವಿಷಯದ ಕುರಿತು ವಿವರಿಸಿದರು. ಅವರು ಪ್ರಯೋಗಾಲಯಗಳ ವಿಕಸನ ಪಾತ್ರವನ್ನು ವೈಜ್ಞಾನಿಕ ಪರಿಶೋಧನೆಯ ತಾಣಗಳಾಗಿ ಮಾತ್ರವಲ್ಲದೆ ಆವಿಷ್ಕಾರ, ನಾವೀನ್ಯತೆ ಮತ್ತು ಪ್ರಗತಿಯ ಕುರಿತು ಒತ್ತಿಹೇಳಿದರು.

ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ.ರವೀಂದ್ರ ಮರಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ರೋಗನಿರ್ಣಯದ ಸೇವೆಗಳು, ರೋಗಿಗಳ ಆರೈಕೆ ಮತ್ತು ವೈದ್ಯಕೀಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆಗಾಗಿ ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ಬದ್ಧತೆಯನ್ನು ಎತ್ತಿ ತೋರಿಸಿದರು. ಎನ್.ಎ.ಬಿ.ಎಲ್. ಮಾನ್ಯತೆಯು ನಮ್ಮ ಪ್ರಯೋಗಾಲಯ ಸೇವೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಡಾ. ಸಿಂಧೂರ ಲಕ್ಷ್ಮಿ ವಂದಿಸಿದರು. ಪ್ಯಾಥೋಲಾಜಿ ಮುಖ್ಯಸ್ಥರಾದ ಡಾ.ಮೇರಿ ಮ್ಯಾಥ್ಯೂ, ರಕ್ತಶಾಸ್ತ್ರ ವಿಭಾಗದ ಡಾ.ಸುಷ್ಮಾ ಬೇಲೂರಕರ್, ಬಯೋಕೆಮಿಸ್ಟ್ರಿ ಪ್ರಭಾರಿ ಡಾ. ವಿಜೇತಾ ಶೆಣೈ, ಮೈಕ್ರೋಬಯಾಲಜಿ ಲ್ಯಾಬ್‌ನ ಉಸ್ತುವಾರಿ ಡಾ. ಬರ್ನಿನಿ ಮತ್ತು ಡಾ. ಪದ್ಮಜಾ, ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಡಾ. ಸುಬಾ ಸೂರಿಯಾ, ಎಲ್ಲ ಸಹಾಯಕ ಸೇವೆ ಮತ್ತು ಆಡಳಿತ ಸೇವೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.