ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿಯಂತಿರುವ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಇನ್ನೊಂದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ಸರತಿ ಸಾಲಿನಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ನಿಲ್ಲಬೇಕಾದ ಅನಿವಾರ್ಯತೆ ಇದೆ. ಕೆಎಂಸಿಆರ್‌ಐನಲ್ಲಿ ಎಲ್ಲ ವಿಭಾಗಗಳುಂಟು. ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲ. ಇಡೀ ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಈ ಭಾಗದಲ್ಲಿ ಎಲ್ಲಿಯೇ ಅಪಘಾತವಾದರೂ ಮೊದಲು ನೆನಪಾಗುವುದು ಹುಬ್ಬಳ್ಳಿಯ ಕೆಎಂಸಿ ಆರ್‌ಐ ಆಸ್ಪತ್ರೆಯೇ. ಉಳಿದ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್‌ಗಳಿದ್ದರೂ ಅವು ಕೂಡ ರೋಗಿಗಳನ್ನು ಕಳುಹಿಸುವುದು ಇಲ್ಲಿಗೆ. ಇಲ್ಲಿನ ವೈದ್ಯರು ಯಾವುದೇ ಬೇಸರಪಟ್ಟುಕೊಳ್ಳದೇ ಬರುವಂತಹ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿಯೇ ಕಳುಹಿಸುತ್ತಾರೆ. ಒಂದೇ ಮಾತಿನಲ್ಲೇ ಹೇಳಬೇಕೆಂದರೆ ಕೆಎಂಸಿಆರ್‌ಐ ಉತ್ತರ ಕರ್ನಾಟಕದ ಮಟ್ಟಿಗೆ ಕಾಮಧೇನುವಿನಂತೆ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.1800ಕ್ಕೂ ಹೆಚ್ಚು ಬೆಡ್‌ಗಳಿರುವ ಅತಿ ದೊಡ್ಡ ಆಸ್ಪತ್ರೆ ಎಂದರೆ ಇದು. ಎಂಆರ್‌ಐ ಯಂತ್ರ:ಇತ್ತೀಚಿಗೆ ಎಂಆರ್‌ಐನ ಅವಶ್ಯಕತೆ ಜಾಸ್ತಿಯಾಗುತ್ತಿದೆ. ರೋಗಿಯ ಮೆದುಳು, ಬೆನ್ನುಹುರಿ, ಮೂಳೆಗಳು, ಕೀಲುಗಳು, ಸ್ತನಗಳು, ಹೃದಯ, ರಕ್ತನಾಳ ಮತ್ತು ಆಂತರಿಕ ಅಂಗಗಳು ಸೇರಿದಂತೆ ದೇಹದ ಯಾವುದೇ ಭಾಗವನ್ನು ಪರೀಕ್ಷಿಸಲು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬಳಕೆಯಾಗುತ್ತದೆ. ಇಷ್ಟೊಂದು ದೊಡ್ಡ ಆಸ್ಪತ್ರೆಯಲ್ಲಿರುವುದು ಒಂದೇ ಒಂದು ಎಂಆರ್‌ಐ.
ಈ ಯಂತ್ರದಲ್ಲೇ ಪ್ರತಿನಿತ್ಯ 38-40ಹೆಚ್ಚು ರೋಗಿಗಳ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಆದರೆ, ಎಂಆರ್‌ಐ ಸ್ಕ್ಯಾನಿಂಗ್‌ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬರೀ ಇಲ್ಲಿಗೆ ಬರುವ ರೋಗಿಗಳದ್ದು ಅಷ್ಟೇ ಅಲ್ಲ. ಬೇರೆ ಬೇರೆ ಕಡೆಗಳಿಂದಲೂ ಇಲ್ಲಿಗೆ ಎಂಆರ್‌ಐ ಸ್ಕ್ಯಾನಿಂಗ್‌ಗಾಗಿ ಬರುತ್ತಾರೆ.ಹಾಗೆ ನೋಡಿದರೆ ಖಾಸಗಿ ಸಂಸ್ಥೆಗಳಲ್ಲೂ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಬಹುದಾಗಿದೆ. ಆದರೆ ಹೊರಗಿನವರು ಕೂಡ ಕೆಎಂಸಿ ಆರ್‌ಐಗೆ ಬರಲು ಮುಖ್ಯ ಕಾರಣ. ದರ ಪಟ್ಟಿ. ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಿಸಬೇಕೆಂದರೆ ₹10 ಸಾವಿರವಾದರೂ ಆಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಬರೀ ₹1500ಗಳಲ್ಲೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಜತೆಗೆ ಎಸ್ಸಿ-ಎಸ್ಟಿ ಇದ್ದರೆ ಪೂರ್ಣ ಉಚಿತವಾಗಿಯೇ ಆಗುತ್ತದೆ. ಆದಕಾರಣ ಇಲ್ಲಿ ರಶ್ ಆಗುತ್ತಿದೆ. ಹೀಗಾಗಿ, ಎಂಆರ್‌ಐ ಮಾಡಿಸಲು ಬಂದ ರೋಗಿಗಳಿಗೆ ನಾಲ್ಕೈದು ದಿನ, ವಾರ, ಹದಿನೈದು ದಿನ ಹೀಗೆ ಡೇಟ್ ಪಡೆದುಕೊಂಡು ಹೋಗಿ ತಮ್ಮ ದಿನಾಂಕ ಬಂದಾಗ ಸ್ಕ್ಯಾನಿಂಗ್‌ಗೆ ಬರಬೇಕಾದ ಅವಶ್ಯಕತೆ ಇದೆ. ತುರ್ತು ಪರಿಸ್ಥಿತಿ ಇದ್ದರೆ ಅದೇ ದಿನ ಮಾಡಲಾಗುತ್ತದೆ. ಅದು ಬೇರೆ ಮಾತು. ಆದರೆ, ಹೆಚ್ಚಿನ ರೋಗಿಗಳಿಗೆ ದಿನಾಂಕ ಪಡೆದುಕೊಂಡು ಬರಬೇಕಾಗುತ್ತಿದೆ. ಎಂಆರ್‌ಐ ಯಂತ್ರಆದಕಾರಣ ಇನ್ನೊಂದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಕೆಎಂಸಿಆರ್‌ಐಗೆ ನೀಡಬೇಕು.ಬರುವಂತಹ ರೋಗಿಗಳು ಯಾವುದೇ ಸಮಸ್ಯೆ ಇಲ್ಲದಂತೆ ಎಂಆರ್‌ಐ ಮಾಡಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದು ಸಾರ್ವಜನಿಕರ ಆಗ್ರಹ. ಸರ್ಕಾರ ಕೆಎಂಸಿಆರ್‌ಐ ವಿಷಯದಲ್ಲಿ ಬರೀ ಆಶ್ವಾಸನೆಯನ್ನೇ ನೀಡುತ್ತದೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ.
ಕಳೆದ ವರ್ಷ ಅಧಿವೇಶನದ ವೇಳೆ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕಕ್ಕೆ ನೀಡಿದ್ದ ಆಶ್ವಾಸನೆಗಳನ್ನೇ ಈಡೇರಿಸಿಲ್ಲ. ಇನ್ನು ಮತ್ತೊಂದು ಎಂಆರ್‌ಐ ಯಂತ್ರ ನೀಡುವಂತೆ ಕೋರಿದರೆ ಸಿಗುತ್ತದೆಯೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ಉಳಿದ ಬೇಡಿಕೆಗಳ ಬಗ್ಗೆ ವಿಳಂಬ ಅನುಸರಿಸಲಿ. ಆದರೆ, ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯ.ಇನ್ನೊಂದು ಯಂತ್ರ ಅಗತ್ಯಕೆಎಂಸಿ ಆರ್‌ಐನಲ್ಲಿ ಏಪ್ರಿಲ್‌ನಿಂದ ಎಂಆರ್‌ಐ ಸ್ಕ್ಯಾನಿಂಗ್ ವಿಭಾಗ ಪ್ರಾರಂಭಿಸಲಾಗಿದೆ. ಪ್ರತಿನಿತ್ಯ 38-40ರಷ್ಟು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ತುರ್ತು ಇದ್ದರೆ ಅದೇ ದಿನ ಮಾಡಲಾಗುತ್ತಿದೆ. ತುರ್ತು ಇಲ್ಲದಿದ್ದಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಿದ್ದರೆ ಮುಂದಿನ ದಿನಾಂಕ ತಿಳಿಸಿ ಕಳುಹಿಸಲಾಗುತ್ತಿದೆ. ಈಗಿನ ಒತ್ತಡ ನೋಡಿದರೆ ಇನ್ನೊಂದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಇಲ್ಲಿ ಅಗತ್ಯವಿದೆ.- ಎಸ್.ಎಫ್.ಕಮ್ಮಾರ, ನಿರ್ದೇಶಕರು, ಕೆಎಂಸಿಆರ್‌ಐ