ಒಂದೇ ದಿನ 1.05 ಕೋಟಿ ಲೀಟರ್‌ಹಾಲು ಸಂಗ್ರಹ, ಕೆಎಂಎಫ್‌ ದಾಖಲೆ

| Published : Jun 04 2025, 01:05 AM IST

ಸಾರಾಂಶ

ಕರ್ನಾಟಕ ಹಾಲು ಮಹಾಮಂಡಳದಲ್ಲಿ (ಕೆಎಂಎಫ್‌) ನಿತ್ಯದ ಹಾಲು ಸಂಗ್ರಹ ಪ್ರಮಾಣ 1.05 ಕೋಟಿ ಲೀಟರ್ ದಾಟಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ಹಾಲು ಮಹಾಮಂಡಳದಲ್ಲಿ (ಕೆಎಂಎಫ್‌) ನಿತ್ಯದ ಹಾಲು ಸಂಗ್ರಹ ಪ್ರಮಾಣ 1.05 ಕೋಟಿ ಲೀಟರ್ ದಾಟಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. ಈ ತಿಂಗಳ ಅಂತ್ಯದೊಳಗೆ ಒಂದು ದಿನದ ಹಾಲಿನ ಸಂಗ್ರಹ 1.10 ಕೋಟಿ ರು.ದಾಟುವ ಗುರಿ ಹೊಂದಿರುವುದಾಗಿ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಜೂ.28ರಂದು 1 ಕೋಟಿ ಲೀಟರ್‌ ಹಾಲು ತಲುಪಿತ್ತು. ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಹಸಿರು ಮೇವು ಲಭ್ಯವಾಗಿರುವುದು ಉತ್ಪಾದನೆ ಹೆಚ್ಚಳಕ್ಕೆ ಕಾರಣ. ಮೇ 23ರಿಂದ ಈವರೆಗೆ ಪ್ರತಿನಿತ್ಯ 50 ಸಾವಿರ ಲೀಟರ್‌ ನಂತೆ ಹಾಲಿನ ಸಂಗ್ರಹ ಹೆಚ್ಚಳವಾಗುತ್ತಿದೆ ಎಂದು ಕೆಎಂಎಫ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

1.10 ಕೋಟಿ ಲೀಟರ್‌ ಸಂಗ್ರಹದ ನಿರೀಕ್ಷೆ:

ರಾಜ್ಯದಲ್ಲಿ ಕೆಎಂಎಫ್‌ ವ್ಯಾಪ್ತಿಯಲ್ಲಿ 16 ಜಿಲ್ಲಾ ಹಾಲು ಒಕ್ಕೂಟಗಳಿದ್ದು 26.89 ಲಕ್ಷಕ್ಕೂ ಹೆಚ್ಚು ರೈತರು ಹಾಲು ಪೂರೈಸುತ್ತಾರೆ. ಜೂ.2ರಂದು ಬೆಂಗಳೂರು ಹಾಲು ಒಕ್ಕೂಟ 18.51 ಲಕ್ಷ ಲೀಟರ್‌, ಹಾಸನ 14.92 ಲಕ್ಷ ಲೀ, ಮಂಡ್ಯ 13.05 ಲಕ್ಷ ಲೀ. ತುಮಕೂರು 10.44 ಲಕ್ಷ ಲೀ, ಮೈಸೂರು 9.54 ಲಕ್ಷ ಲೀ, ಶಿವಮೊಗ್ಗ 8.76 ಲಕ್ಷ ಲೀ, ಕೋಲಾರ 7.79 ಲಕ್ಷ ಲೀ, ಚಿಕ್ಕಬಳ್ಳಾಪುರ 5.28 ಲಕ್ಷ ಲೀ, ದಕ್ಷಿಣ ಕನ್ನಡ 4.16 ಲಕ್ಷ ಲೀ, ಚಾಮರಾಜನಗರ 3.14 ಲಕ್ಷ ಲೀ, ಬಳ್ಳಾರಿ 2.30 ಲಕ್ಷ ಲೀ, ಬೆಳಗಾವಿ 2.29 ಲಕ್ಷ ಲೀ, ಧಾರವಾಡ 1.98 ಲಕ್ಷ ಲೀ, ಹಾವೇರಿ 1.61 ಲಕ್ಷ ಲೀ, ವಿಜಯಪುರ 1.53 ಲಕ್ಷ ಲೀ, ಕಲಬುರಗಿ 0.62 ಲಕ್ಷ ಲೀ. ಸೇರಿ ಒಟ್ಟು 1,05 ಲಕ್ಷಕ್ಕೂ ಹೆಚ್ಚು ಲೀಟರ್‌ ಹಾಲು ಸಂಗ್ರಹವಾಗಿದೆ.

ಬಾಕ್ಸ್...

ದರ ಏರಿಕೆಯೂ ಕಾರಣ!

ಮುಖ್ಯವಾಗಿ ಏ.1ರಿಂದ ಹಾಲಿನ ದರ ₹4 ಹೆಚ್ಚಳ ಮಾಡಲಾಗಿದೆ. ಇದರಿಂದ ರೈತರಿಗೆ ಪ್ರತಿಲೀಟರ್‌ಗೆ ₹35.30 ಮತ್ತು ಪ್ರೋತ್ಸಾಹ ಧನ ₹5 ಸೇರಿ ಒಟ್ಟು ₹40 ಕ್ಕಿಂತ ಹೆಚ್ಚು ಹಣ ಸಿಗುತ್ತಿದೆ. ಇದರಿಂದ ಡೇರಿಗಳಿಗೆ ಹಾಲು ತಂದು ಹಾಕುವವರ ಸಂಖ್ಯೆಯೂ ಹೆಚ್ಚಿದ್ದು, ಹಾಲಿನ ಸಂಗ್ರಹದಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ಕೆಎಂಎಫ್‌ ಅಧಿಕಾರಿಗಳು.