ಕೃಷ್ಣನ ನೀತಿ, ರೀತಿ ತಿಳಿದು ಅನುಸರಿಸಿ: ಪ್ರಾಧ್ಯಾಪಕಿ ಬೋರಮ್ಮ ಎಚ್. ಅಂಗಡಿ ಸಲಹೆ

| Published : Aug 27 2024, 01:37 AM IST

ಸಾರಾಂಶ

ಶ್ರೀ ಕೃಷ್ಣ ಮತ್ತು ಸುಧಾಮನ ಗೆಳತನ ಇಡೀ ವಿಶ್ವದಲ್ಲಿ ಮಾದರಿ ಗೆಳೆತನವಾಗಿ ನಿಂತಿದೆ, ಅಂತಸ್ತಿನ ಅಂತರವನ್ನು ಮರೆತು ನಾವಿಬ್ಬರೂ ಒಂದೇ ಎಂದು ಬದುಕಿದ ಗೆಳೆತನವದು, ಅಂತಹ ಕೃಷ್ಣನ ಹಾದಿಯ ಕತೆಗಳನ್ನು ಹೇಳುತ್ತಾ ಅದರಂತೆ ನಡೆಯಲು ಪೋಷಕರು ಮಕ್ಕಳಲ್ಲಿ ತಿಳಿ ಹೇಳಬೇಕು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಶ್ರೀಕೃಷ್ಣನ ಜನ್ಮಾಷ್ಟಮಿಯು ಮಕ್ಕಳ ವೇಷಭೂಷಣ ಸ್ಪರ್ಧೆಗಷ್ಟೇ ಸೀಮಿತವಾಗದೇ ಕೃಷ್ಣನ ನೀತಿ, ರೀತಿಗಳನ್ನು ತಿಳಿದುಕೊಂಡು ಆತನ ಹಾದಿಯಲ್ಲಿ ನಡೆಯಬೇಕಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬೋರಮ್ಮ ಎಚ್. ಅಂಗಡಿ ಹೇಳಿದರು.ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಪಟ್ಟಣದ ಆದಿಚುಂಚನಗಿರಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಶ್ರೀ ಕೃಷ್ಣ ಮತ್ತು ಸುಧಾಮನ ಗೆಳತನ ಇಡೀ ವಿಶ್ವದಲ್ಲಿ ಮಾದರಿ ಗೆಳೆತನವಾಗಿ ನಿಂತಿದೆ, ಅಂತಸ್ತಿನ ಅಂತರವನ್ನು ಮರೆತು ನಾವಿಬ್ಬರೂ ಒಂದೇ ಎಂದು ಬದುಕಿದ ಗೆಳೆತನವದು, ಅಂತಹ ಕೃಷ್ಣನ ಹಾದಿಯ ಕತೆಗಳನ್ನು ಹೇಳುತ್ತಾ ಅದರಂತೆ ನಡೆಯಲು ಪೋಷಕರು ಮಕ್ಕಳಲ್ಲಿ ತಿಳಿ ಹೇಳಬೇಕು ಎಂದರು.

ಅರ್ಜುನನಿಗೆ ಭಗವದ್ಗೀತೆ ಭೋದನೆ ಸಮಯದಲ್ಲಿಕಾಲಕ್ಕೆ ತಕ್ಕಂತೆ ಒಳ್ಳೆ ಕೆಲಸ ಮಾಡುತ್ತಾ ನಡೆಯುವ ದೃಢ ನಿರ್ಧಾರದ ಬಗ್ಗೆ ಅರ್ಥಪೂರ್ಣವಾಗಿ ಹೇಳಲಾಗಿದೆ, ಅವುಗಳನ್ನು ನಾವು ಅನುಸರಿಸಿದ್ದೇ ಆದಲ್ಲಿ ನಮ್ಮ ಭಾರತ ವಿಶ್ವ ಗುರಿವಾಗಲಿದೆ ಎಂದರು.

ಕೃಷ್ಣನ ಬಗ್ಗೆ ಹಲವಾರು ರೀತಿಯ ಸಾವಿರಾರು ಆದರ್ಶ ವ್ಯಕ್ತಿತ್ವವುಳ್ಳ ಉಪಕತೆಗಳಿವೆ, ಅಂತಹ ಕತೆಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿ ಹೇಳಿದರೆ ಮಕ್ಕಳು ಅದೇ ರೀತಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ವಿದ್ಯಾಸಂಸ್ಥೆಯ ಗೌರವ ಆಡಳಿತಾಧಿಕಾರಿ ಪ್ರೊ.ಕೆ.ಪಿ. ಬಸವೇಗೌಡ ಮಾತನಾಡಿ, ಶ್ರೀ ಕೃಷ್ಣನನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ, ವಿದೇಶಗಳಲ್ಲೂ ಸಹ ಕೃಷ್ಣನ ದೇವಾಲಯಗಳಿದ್ದು, ಪೂಜಾ ಪುರಸ್ಕಾರಗಳು, ಆರಾಧನೆಗಳು ಸಹ ಅದ್ದೂರಿಯಾಗಿ ನಡೆಯುತ್ತಿವೆ ಎಂದರು.

ಶಾಲಾ ವಿದ್ಯಾರ್ಥಿಗಳು ಕೃಷ್ಣ ರುಕ್ಮಿಣಿ ವೇಷ ತೊಟ್ಟು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಪಾಲ ಜೆ.ಎನ್. ವೆಂಕಟೇಶ್, ಪಿಯು ಕಾಲೇಜಿನ ಪ್ರಾಂಶುಪಾಲ ಭೈರೆಗೌಡ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಭೈರಪ್ಪ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಂದಿನಿ, ಪತ್ರಕರ್ತ ಸಂಘದ ಅಧ್ಯಕ್ಷ ಕಬಿನಿ ಮಂಜು ಇದ್ದರು.