ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಆದರೆ ವಿಶ್ವಾಸಾರ್ಹತೆ ಮತ್ತು ನಿಖರ ಮಾಹಿತಿಯ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ನನ್ನ ನಂಬಿಕೆಯಂತೆ ಮುಂದಿನ ಐದು ವರ್ಷಗಳಲ್ಲಿ ಮುದ್ರಣ ಮಾಧ್ಯಮ ಮತ್ತೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದೆ. ಏಕೆಂದರೆ ಜನರು ಅಂತಿಮವಾಗಿ ನಂಬಬಹುದಾದ ಸುದ್ದಿಯನ್ನು ಹುಡುಕುತ್ತಾರೆ. ಪತ್ರಕರ್ತರು ಸತ್ಯವನ್ನು ಜನರಿಗೆ ತಲುಪಿಸುವ ಸೇತುವೆಯಾಗಿದ್ದು, ಅವರ ಜವಾಬ್ದಾರಿಯನ್ನು ಗೌರವಿಸುವ ಅಗತ್ಯವಿದೆ.
ಕನ್ನಡಪ್ರಭ ವಾರ್ತೆ ಹಾಸನ
ಇತ್ತೀಚಿನ ಪತ್ರಿಕೋದ್ಯಮವನ್ನು ನೋಡಿದರೆ ಭಯವಾಗುತ್ತದೆ. ಏಕೆಂದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಲ ಮಾಧ್ಯಮಗಳು ಹುಟ್ಟಿಕೊಂಡು ನಂತರ ಕಣ್ಮರೆಯಾಗುತ್ತಿವೆ. ಹಾಗಾಗಿ ಹಣದ ಆಸೆಗಾಗಿ ಪತ್ರಿಕೋದ್ಯಮಕ್ಕೆ ಬರುವವರು ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅಗತ್ಯವಾಗಿದೆ ಎಂದು ಹಾಯ್ ಬೆಂಗಳೂರು ಹಾಗೂ ಓ ಮನಸೇ ಸಂಪಾದಕಿ ಭಾವನಾ ಬೆಳಗೆರೆ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರ ಜ್ಞಾನಾರ್ಜನೆ ನಿಟ್ಟಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ, ಪತ್ರಿಕೋದ್ಯಮದಲ್ಲಿ ಎಲ್ಲರೂ ಮಾಡುವ ಸುದ್ದಿಯನ್ನು ಮಾಡುವುದಕ್ಕಿಂತ ಯಾರೂ ಮಾಡದ ಸುದ್ದಿಯನ್ನು ಹುಡುಕಿ ಹೊರತರುವುದು ಮುಖ್ಯ. ಪತ್ರಕರ್ತನಿಂದ ತಪ್ಪಾಗಬಹುದು. ಆದರೆ ಅದು ತಪ್ಪು ಎಂದು ಅರಿತ ಕ್ಷಣದಲ್ಲೇ ಅದನ್ನು ತಿದ್ದಿಕೊಳ್ಳುವ ಪ್ರಾಮಾಣಿಕತೆ ಇರಬೇಕು. ಸತ್ಯವನ್ನು ಜನರ ಮುಂದಿಡುವ ಧೈರ್ಯವೇ ನಿಜವಾದ ಪತ್ರಿಕೋದ್ಯಮದ ಗುರುತಾಗಬೇಕು. ಪುಸ್ತಕ ಓದುವ ಅಭ್ಯಾಸವೇ ಉತ್ತಮ ಬರಹಗಾರನನ್ನು ರೂಪಿಸುತ್ತದೆ. ಹೆಚ್ಚು ಓದಿದಷ್ಟು ಭಾಷೆಯ ಮೇಲೆ ಹಿಡಿತ ಬೆಳೆಯುತ್ತದೆ. ಓದುವ ಹವ್ಯಾಸವಿಲ್ಲದೆ ಉತ್ತಮ ಪತ್ರಿಕೋದ್ಯಮ ಸಾಧ್ಯವಿಲ್ಲ. ಪ್ರತಿಯೊಬ್ಬ ಪತ್ರಕರ್ತನೂ ಪ್ರತಿದಿನ ಏನಾದರೂ ಹೊಸದನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗಿದೆ. ಆದರೆ ವಿಶ್ವಾಸಾರ್ಹತೆ ಮತ್ತು ನಿಖರ ಮಾಹಿತಿಯ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ನನ್ನ ನಂಬಿಕೆಯಂತೆ ಮುಂದಿನ ಐದು ವರ್ಷಗಳಲ್ಲಿ ಮುದ್ರಣ ಮಾಧ್ಯಮ ಮತ್ತೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದೆ. ಏಕೆಂದರೆ ಜನರು ಅಂತಿಮವಾಗಿ ನಂಬಬಹುದಾದ ಸುದ್ದಿಯನ್ನು ಹುಡುಕುತ್ತಾರೆ. ಪತ್ರಕರ್ತರು ಸತ್ಯವನ್ನು ಜನರಿಗೆ ತಲುಪಿಸುವ ಸೇತುವೆಯಾಗಿದ್ದು, ಅವರ ಜವಾಬ್ದಾರಿಯನ್ನು ಗೌರವಿಸುವ ಅಗತ್ಯವಿದೆ ಎಂದು ತಿಳಿಸಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ ಮಾತನಾಡಿ, ರವಿಬೆಳಗೆರೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷೆ ಮತ್ತು ಹೊಸ ಓದುಗರನ್ನು ಪರಿಚಯಿಸಿದ ವ್ಯಕ್ತಿ. ಅವರ ಪುಸ್ತಕಗಳನ್ನು ಓದಲು ಆರಂಭಿಸಿದವರು ಕೊನೆಯ ಪುಟದವರೆಗೂ ಓದದೆ ಬಿಡುವುದಿಲ್ಲ. ಅದೇ ಚಿಂತನಾಶೀಲತೆ ಮತ್ತು ಅಭಿವ್ಯಕ್ತಿಯ ಶಕ್ತಿ ಇಂದು ಭಾವನಾ ಬೆಳಗೆರೆ ಅವರ ಮಾತುಗಳಲ್ಲೂ ಕಾಣಿಸುತ್ತಿದೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಚಲಂ ಹಾಡ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಕೆಂಚೇಗೌಡ, ರಾಜ್ಯ ಕಾರ್‍ಯಕಾರಿ ಸದಸ್ಯ ಪ್ರಮೋದ್, ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಪ್ರಕಾಶ್ ಬೆಳವಾಡಿ ಇತರರು ಇದ್ದರು.