ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪ ನಿವಾರಣೆಯಾಗಿ ಸಿಗಬಹುದಾದ ಪುಣ್ಯ ಗೋ ಪೂಜೆಯಿಂದ ಸಿಗುತ್ತದೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದಲ್ಲಿ ಗೋ ಸೇವಾ ಗತಿವಿಧ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಆಶ್ರಯದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನಂದಿ ರಥಯಾತ್ರೆ ನಗರಕ್ಕೆ ಆಗಮಿಸಿದಾಗ ನಂದಿ ರಥಯಾತ್ರಾ ಸಮಿತಿಯವರು, ನಗರದ ಗಣ್ಯರು ಸ್ವಾಗತಿಸಿ ಬರಮಾಡಿಕೊಂಡರು.ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಿತು. ಇದರ ಪ್ರಯುಕ್ತ ನಡೆದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿದ ಹಿರೇಮಠ ಶ್ರೀಗಳು ಮಾತನಾಡಿ, ಗೋವಿನ ಪಾವಿತ್ರತೆ, ಮಹತ್ವದ ಬಗ್ಗೆ ನಮ್ಮ ವೇದ, ಪುರಾಣ, ಉಪನಿಷತ್‌ಗಳಲ್ಲಿ ಉಲ್ಲೇಖವಿದೆ. ಗೋವು ನಮಗೆ ದೇವರಾಗಿ, ತಾಯಿಯಾಗಿ ಪೂಜ್ಯವಾಗಿದೆ ಎಂದರು.ಗೋ ದಾನ ಶ್ರೇಷ್ಠವಾದದ್ದು, ಗೋವುಗಳು ನಮ್ಮ ಬದುಕಿನ ಎಲ್ಲಾ ಆಯಾಮಗಳಲ್ಲೂ ಗೋವಿಗೆ ನಾವು ಪವಿತ್ರ ಸ್ಥಾನ ನೀಡಿದ್ದೇವೆ. ಗೋ ಸಂತತಿ ರಕ್ಷಣೆ ಮಾಡುವ ಪರಂಪರೆ ಮುಂದುವರೆಸಬೇಕು ಎಂದು ಹೇಳಿದರು.ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಗುರುರಾಜ ಕುಲಕರ್ಣಿ ಮುಖ್ಯ ಭಾಷಣ ಮಾಡಿದರು. ನಂದಿ ರಥಯಾತ್ರಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ವಿಷ್ಣು ಸಹಸ್ರನಾಮ ಪಾರಾಯಣ, ಬಳಿಕ ಗೋ ಪೂಜೆ ನಡೆಸಲಾಯಿತು.ಕಾರ್ಯಕ್ರಮದ ನಂತರ ಸಾಯಿ ರಾಮನ್ ನೃತ್ಯಕೇಂದ್ರದವರು ‘ಪುಣ್ಯಕೋಟಿ’ ಎಂಬ ನೃತ್ಯರೂಪಕ ನಡೆಸಿಕೊಟ್ಟರು.ಇದಕ್ಕೂ ಮೊದಲು ಗುಬ್ಬಿಯಿಂದ ಆಗಮಿಸಿದ ನಂದಿ ರಥಯಾತ್ರೆಯನ್ನು ಭೀಮಸಂದ್ರದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸ್ವಾಗತಿಸಿ ನಂದಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರಥಯಾತ್ರಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ , ಟಿ.ಕೆ.ನಂಜುಂಡಪ್ಪ, ಮಹೇಂದ್ರ ವೈಷ್ಣವ್, ಆರ್.ಎಲ್.ರಮೇಶ್‌ಬಾಬು, ಮುರಳಿಧರ ಹಾಲಪ್ಪ, ಎಸ್.ಜಿ.ಚಂದ್ರಮೌಳಿ, ವೈ.ಎಚ್.ಹುಚ್ಚಯ್ಯ, ಎಸ್.ನಾಗಣ್ಣ, ಕಾರ್ಯದರ್ಶಿ ಅನಂತರಾಮು, ಖಜಾಂಚಿ ಡಾ.ಎಸ್.ಪರಮೇಶ್, ಸಹಕಾರ್ಯದರ್ಶಿಗಳಾದ ಬಿ.ಎಸ್.ಮಹೇಶ್, ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜು ಇದ್ದರು.