ಸಾರಾಂಶ
ಶಾಲಾ ಮಟ್ಟದಲ್ಲಿಯೆ ವಿದ್ಯಾರ್ಥಿಗಳು ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ತಿಳಿದಿರಲಿ ಎಂಬ ಸದುದ್ದೇಶದಿಂದ ಶಾಲೆಗಳಲ್ಲಿ ಶಾಲಾ ಸಂಸತ್ತನ್ನು ರಚಿಸಲಾಗುತ್ತದೆ. ನೀವುಗಳೆಲ್ಲ ಸಂಸತ್ತಿನ ಬಗ್ಗೆ ಈಗಿನಿಂದಲೆ ಅರಿವನ್ನು ಹೊಂದಿರುವುದು ಅವಶ್ಯಕ ಎಂದು ಸೋಮೇಶ್ವರ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಎಂ. ಬಿ. ರಮಾಣಿ ಹೇಳಿದರು.
ನರೇಗಲ್ಲ: ಶಾಲಾ ಮಟ್ಟದಲ್ಲಿಯೆ ವಿದ್ಯಾರ್ಥಿಗಳು ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ತಿಳಿದಿರಲಿ ಎಂಬ ಸದುದ್ದೇಶದಿಂದ ಶಾಲೆಗಳಲ್ಲಿ ಶಾಲಾ ಸಂಸತ್ತನ್ನು ರಚಿಸಲಾಗುತ್ತದೆ. ನೀವುಗಳೆಲ್ಲ ಸಂಸತ್ತಿನ ಬಗ್ಗೆ ಈಗಿನಿಂದಲೆ ಅರಿವನ್ನು ಹೊಂದಿರುವುದು ಅವಶ್ಯಕ ಎಂದು ಸೋಮೇಶ್ವರ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಎಂ. ಬಿ. ರಮಾಣಿ ಹೇಳಿದರು.
ಸಮೀಪದ ಕೋಟುಮಚಗಿಯ ಸೋಮೇಶ್ವರ ಪ್ರೌಢಶಾಲೆಯಲ್ಲಿ ಈಚೆಗೆ ೨೦೨೫-೨೬ನೇ ಸಾಲಿನ ಶಾಲಾ ಸಂಸತ್ತನ್ನು ಉದ್ಘಾಟಿಸಿ ಅವರು ಮಾತನಾಡಿದರು.ಡಾ. ಬಿ. ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ನಮಗೆ ಆಡಳಿತ ನಡೆಸಲು ಮೂಲ ಗ್ರಂಥವಾಗಿದೆ. ಈ ಸಂವಿಧಾನದ ಬಗ್ಗೆಯೂ ನಿಮಗೆ ತಿಳಿವಳಿಕೆ ಇರಬೇಕೆಂದು ರಮಾಣಿ ತಿಳಿಸಿದರು.ಆಡಳಿತ ಮಂಡಳಿಯ ಸದಸ್ಯ ಶ್ರೀಧರ ಕುಲಕರ್ಣಿ ಮಾತನಾಡಿ, ಶಾಲೆಗಳಲ್ಲಿ ನೀವು ಗಳಿಸಿದ ಜ್ಞಾನ ಮುಂದೆ ನಿಮ್ಮ ಜೀವನದಲ್ಲಿ ಅನುಕೂಲವಾಗುತ್ತದೆ. ಶಾಲಾ ಸಂಸತ್ತು ನಿಮಗೆ ಉತ್ತಮ ರಾಜಕಾರಣಿಯಾಗಲು ಪ್ರೇರಣೆ ನೀಡುವ ತಳಹದಿಯಾಗಿದೆ. ಇಕೋ ಕ್ಲಬ್, ಆರೋಗ್ಯ ಕ್ಲಬ್‌ಗಳೂ ಸಹ ಮುಂದೆ ನಿಮ್ಮಲ್ಲಿ ವಿವಿಧ ಜ್ಞಾನವನ್ನು ಬೆಳೆಸಿಕೊಂಡು ಮುನ್ನಡೆಯಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಧಾನ ಮಂತ್ರಿ ಮತ್ತಿತರ ಖಾತೆಗಳ ಮಂತ್ರಿಗಳಾಗಿರುವ ನೀವುಗಳು ನಿಮ್ಮ ಉತ್ತಮ ಕಾರ್ಯಗಳ ಮೂಲಕ ಅನುಭವವನ್ನು ಪಡೆಯಿರಿ ಎಂದರು.ಆಡಳಿತ ಮಂಡಳಿ ಸದಸ್ಯ ರಮಜಾನ್‌ಸಾಬ್ ಘಟ್ಟದ ವೇದಿಕೆಯ ಮೇಲಿದ್ದರು. ಮುಖ್ಯ ಶಿಕ್ಷಕಿ ಟಿ. ಜಿ. ಕಂಬಾಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಸಂಸತ್ತು, ಆರೋಗ್ಯ ಕೂಟ ಮತ್ತು ಇಕೋ ಕ್ಲಬ್‌ಗಳ ಮಹತ್ವ ಕುರಿತು ಮಾತನಾಡಿದರು. ದೈಹಿಕ ಶಿಕ್ಷಕ ಸಿ.ಎಂ. ಗೋದಿ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ಪಿ.ಎಚ್. ತಾಂಬೋಟಿ ಸ್ವಾಗತಿಸಿದರು. ಶಿಕ್ಷಕಿ ಆರ್.ಡಿ. ಜಗ್ಗಲ ನಿರೂಪಿಸಿದರು. ಆರ್. ಎಸ್. ನೀರಲಗಿ ವಂದಿಸಿದರು. ಶಾಲಾ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.