ಪತ್ರಿಕೆ ಓದಿನಿಂದ ಜ್ಞಾನದ ಹರಿವು: ಜಿಲ್ಲಾಧಿಕಾರಿ ನಳಿನ್ ಅತುಲ್

| Published : Feb 08 2024, 01:32 AM IST

ಪತ್ರಿಕೆ ಓದಿನಿಂದ ಜ್ಞಾನದ ಹರಿವು: ಜಿಲ್ಲಾಧಿಕಾರಿ ನಳಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಬಿರವು ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ, ಎಫ್‌ಡಿಎ, ಎಸ್‌ಡಿಎ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ. ದೈನಂದಿನ ಓದುವ ಕ್ರಮ ಬದಲಾವಣೆ ಮಾಡಿಕೊಳ್ಳಬೇಕು. ದಿನನಿತ್ಯ ಓದುವ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.

ಕೊಪ್ಪಳ: ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಭಾಗವಹಿಸುವ ವಿದ್ಯಾರ್ಥಿಗಳು ನಿತ್ಯ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.ಜಿಪಂ, ಎಲ್ ಆ್ಯಂಡ್‌ ಟಿ ಕಂಪನಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ವಿಜಯೋನ್ನತಿ ಶಿಕ್ಷಣ ಸೇವಾ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಗರದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾದ ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಶಿಬಿರವು ಅಗ್ನಿವೀರ ಸೈನಿಕ ಹುದ್ದೆಯ ಲಿಖಿತ ಪರೀಕ್ಷೆ, ಎಫ್‌ಡಿಎ, ಎಸ್‌ಡಿಎ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ. ದೈನಂದಿನ ಓದುವ ಕ್ರಮ ಬದಲಾವಣೆ ಮಾಡಿಕೊಳ್ಳಬೇಕು. ದಿನನಿತ್ಯ ಓದುವ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಒಂದು ಯಾವುದೇ ಸರ್ಕಾರಿ ಕಾರ್ಯಕ್ರಮದ ಬಗ್ಗೆ ಅಥವಾ ಯಾವುದೇ ಒಂದು ವಿಷಯದ ಬಗ್ಗೆ ತಿಳಿವಳಿಕೆ ಪಡೆದು ಕನಿಷ್ಠ ಬೇರೆ-ಬೇರೆ ಪತ್ರಿಕೆಗಳನ್ನು ಹಾಗೂ ಲೇಖನಗಳನ್ನು ಓದಬೇಕು. ಆಗ ಮಾತ್ರ ನಿಮಗೆ ಸ್ಪಷ್ಟ ಮಾಹಿತಿ ತಿಳಿಯುವುದಕ್ಕೆ ಅನುಕೂಲವಾಗುತ್ತದೆ ಎಂದರು. ಕಾಗೆಯ ದೃಢ ನಿರ್ಧಾರ ಮತ್ತು ಪರಿಶ್ರಮ, ಬಕ ಪಕ್ಷಿಯಂತೆ ಏಕಾಗ್ರತೆ, ಶ್ವಾನದಂತೆ ಲಘುವಾಗಿ ಮಲಗುವುದು, ಅಲ್ಪ ಪ್ರಮಾಣದ ಆಹಾರ ಸೇವನೆ, ಮನೆಯ ಕೆಲಸ ಕಾರ್ಯಗಳಿಗೆ ಹೆಚ್ಚು ಗಮನ ನೀಡದೆ ಓದಿನ ಕಡೆ ಹೆಚ್ಚು ಒತ್ತು ಕೊಡಬೇಕು ಎಂದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಪರೀಕ್ಷೆಯ ತರಬೇತಿ ಶಿಬಿರ ಆಯೋಜಿಸುವ ಕುರಿತಂತೆ ಮಾಧ್ಯಮದವರು ಸಲಹೆ ನೀಡಿದ್ದರು. ಅದರಂತೆ ವಿದ್ಯಾರ್ಥಿಗಳಿಗಾಗಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು ಶೇ.99 ತರಬೇತಿ ಪೂರ್ಣಗೊಳಿಸಿಯೇ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಕೆಲವರು ಪಾಸ್ ಮತ್ತು ಇನ್ನು ಕೆಲವರು ಫೇಲ್ ಆಗುತ್ತಾರೆ. ಅನುತ್ತೀರ್ಣರಾದವರಲ್ಲಿ ಸಾಮಾನ್ಯವಾಗಿ ನಾವು ಲಕ್ಕಿ ಇಲ್ಲ, ಅವರು ಲಕ್ಕಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಆದರೆ ಅರ್ಥ ಮಾಡಿಕೊಂಡರೆ, ಈ ರೀತಿಯ ಭಾವನೆ ಬರುವುದಿಲ್ಲ. ಸಫಲತೆ ಸಿಗದಿದ್ದಲ್ಲಿ ಯಾರೂ ನಿರಾಸಕ್ತರಾಗಬಾರದು ಎಂದರು.ಐಎಫ್‌ಎಸ್ ಅಧಿಕಾರಿ ಕಾವ್ಯ ಚತುರ್ವೇದಿ ಮಾತನಾಡಿ, ಈ ಪರೀಕ್ಷೆಯು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಈ ತರಬೇತಿ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಪಂ ಮುಖ್ಯಲೆಕ್ಕಾಧಿಕಾರಿ ಅಮಿನ್ ಅತ್ತಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ತಾಪಂ ಇಒ ದುಂಡಪ್ಪ ತುರಾದಿ, ಮಾರ್ಗದರ್ಶಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ಶರಣಯ್ಯ ಅಬ್ಬಿಗೇರಿಮಠ, ಶ್ರೀಧರ ವಾಸಿ, ವಿಜಯೋನ್ನತಿ ಶಿಕ್ಷಣ ಸೇವಾ ಟ್ರಸ್ಟ್‌ನ ತಿಪ್ಪಣ್ಣ ಬಿಜಕಲ್ ಉಪಸ್ಥಿತರಿದ್ದರು.